
ಬೆಂಗಳೂರಿನ ಹೆಚ್ಚಿನ ಪ್ರದೇಶಗಳನ್ನು ಮೆಟ್ರೋ ರೈಲು ಸಂಪರ್ಕಕ್ಕೆ ತರಲು ಬಿಎಂಆರ್‌ಸಿಎಲ್ ಶತಪ್ರಯತ್ನ ಮುಂದುವರಿಸಿದೆ. ಈಗಾಗ್ಲೇ ಹಲವು ಸ್ಥಳಗಳಲ್ಲಿ ಮೆಟ್ರೊ ರೈಲು ಕಾಮಗಾರಿಗಳು ನಡೆಯುತ್ತಿವೆ. ಕೆಲವು ಕಡೆ ಕಾಮಗಾರಿ ಮುಕ್ತಾಯದ ಹಂತವನ್ನೂ ತಲುಪಿದೆ.
ಈ ವರ್ಷದ ಅಂತ್ಯದೊಳಗೆ ಸುಮಾರು 40.15 ಕಿಲೋಮೀಟರ್‌ಗಳಷ್ಟು ಪ್ರದೇಶವನ್ನು ಮೆಟ್ರೋ ಸಂಪರ್ಕಕ್ಕೆ ತರುವುದಾಗಿ ಈಗಾಗ್ಲೇ ಸರ್ಕಾರ ಕೂಡ ಹೇಳಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಇತ್ತೀಚೆಗೆ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ 2023-2024ರ ಆರ್ಥಿಕ ವರ್ಷಕ್ಕೆ ನಮ್ಮ ಮೆಟ್ರೋದ ಚಾಲ್ತಿಯಲ್ಲಿರುವ ಯೋಜನೆಗಳಿಗೆ 2500 ಕೋಟಿ ರೂಪಾಯಿ ಮೀಸಲಿಡಲಾಗಿತ್ತು.
ಈ ಅವಧಿಯಲ್ಲಿ ಬಿಎಂಆರ್‌ಸಿಎಲ್ 40 ಕಿಲೋಮೀಟರ್‌ಗೂ ಹೆಚ್ಚು ಹೊಸ ಮೆಟ್ರೋ ಮಾರ್ಗವನ್ನು ಕಾರ್ಯಗತಗೊಳಿಸಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು. ಪ್ರಸ್ತುತ ಬೆಂಗಳೂರು ಮೆಟ್ರೋ ರೈಲು ಯೋಜನೆ 56 ಕಿಮೀ ಜಾಲದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ 58.19 ಕಿಮೀ ಉದ್ದದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 30 ನಿಲ್ದಾಣಗಳೊಂದಿಗೆ ಸಂಪರ್ಕಿಸುವ ಮೆಟ್ರೋ ರೈಲು ಯೋಜನೆಯ ಕಾಮಗಾರಿಗಳು ತ್ವರಿತಗತಿಯಲ್ಲಿ ಪ್ರಗತಿಯಲ್ಲಿವೆ. ಪ್ರಸಕ್ತ ಬಿಎಂಆರ್‌ಸಿಎಲ್ ಪ್ರಕಾರ, ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ಲೈನ್, ಕೆಂಗೇರಿಯಿಂದ ಚಲ್ಲಘಟ್ಟ, ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ಮತ್ತು ನಾಗಸಂದ್ರದಿಂದ ಬಿಐಇಸಿ ವಿಭಾಗಗಳು ಈ ವರ್ಷ ಕಾರ್ಯಾರಂಭ ಮಾಡಲಿವೆ.
ಕೆಆರ್‌ಪುರಂನಿಂದ ವೈಟ್‌ಫೀಲ್ಡ್ ಮಾರ್ಗದ ಅಂತಿಮ ಪ್ರಯೋಗ ನಡೆಯುತ್ತಿದ್ದು, ಮಾರ್ಚ್ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆಯಿದೆ. ಕೆಂಗೇರಿಯಿಂದ ಚಲ್ಲಘಟ್ಟದವರೆಗೆ ದೀರ್ಘಾವಧಿಯಿಂದ ಬಾಕಿ ಉಳಿದಿರುವ ಮತ್ತೊಂದು ನೇರಳೆ ಮಾರ್ಗದ ವಿಸ್ತರಣೆಯು 2023ರ ಮಧ್ಯಭಾಗದಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.ಆರ್‌ವಿ ರಸ್ತೆ ನಿಲ್ದಾಣದಿಂದ ಬೊಮ್ಮಸಂದ್ರದವರೆಗಿನ ಎರಡನೇ ಹಂತದ ಅಡಿಯಲ್ಲಿ ಜಯದೇವ, ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಹಾದುಹೋಗುವ ಮಾರ್ಗವು ಮತ್ತೊಂದು ಪ್ರಮುಖ ವಿಸ್ತರಣೆಯಾಗಿದೆ.
ಮೆಟ್ರೋ ಜಾಲಕ್ಕೆ ಸಂಬಂಧಿಸಿದ ಮೂರನೇ ಹಂತದ ಕಾಮಗಾರಿಯನ್ನು ಹಿಂದಿನ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. 31 ನಿಲ್ದಾಣಗಳೊಂದಿಗೆ 44.65 ಕಿಮೀ ಉದ್ದದ ಎರಡು ಕಾರಿಡಾರ್‌ಗಳ ವಿವರವಾದ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಯೋಜನೆಯ ಅಂದಾಜು ವೆಚ್ಚ 16,328 ಕೋಟಿ ರೂಪಾಯಿಯಾಗಿದ್ದು, ಕೇಂದ್ರ ಸರ್ಕಾರದ ಅನುಮೋದನೆಯ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರ ಬಜೆಟ್ ದಾಖಲೆಯಲ್ಲಿ ತಿಳಿಸಿದೆ.