ದೆಹಲಿಯ ಅಕ್ಷರಧಾಮ ಮೆಟ್ರೋ ನಿಲ್ದಾಣದಲ್ಲಿ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬೆಳಗ್ಗೆ 7.28ರ ಸುಮಾರಿಗೆ ಈ ಘಟನೆ ನಡೆದಿದೆ. ಯುವತಿ ಮೆಟ್ರೋ ನಿಲ್ದಾಣದ ಟೆರೆಸ್ ಮೇಲೆ ಹತ್ತಿಕೊಂಡು ಕೆಳಕ್ಕೆ ಜಿಗಿಯಲು ಸಜ್ಜಾಗಿದ್ಲು.
ಕೂಡಲೇ ಸಿಐಎಸ್ಎಫ್ ಸಿಬ್ಬಂದಿ ಗೋಡೆಯ ಸ್ಥಳಕ್ಕೆ ಬಂದಿದ್ದಾರೆ. ಯೋಧರು ಆಕೆಯ ಮನವೊಲಿಸಿ ಕರೆತರಲು ಯತ್ನಿಸಿದ್ದಾಳೆ. ಆದ್ರೆ ಆಕೆ ಒಪ್ಪಲೇ ಇಲ್ಲ. ಬೇಕಂತಲೇ ಯೋಧರು ಆಕೆಯೊಡನೆ ಸಂಭಾಷಣೆ ಮುಂದುವರಿಸಿದ್ರು.
ಮತ್ತೊಂದೆಡೆ ಉಳಿದ ಸಿಬ್ಬಂದಿ ದಪ್ಪನೆಯ ಶೀಟ್ ಹಿಡಿದುಕೊಂಡು ಗೋಡೆಯ ಕೆಳಭಾಗದಲ್ಲಿ ಜಮಾಯಿಸಿದ್ರು. ಆಕೆ ಕೆಳಕ್ಕೆ ಜಿಗಿದಾಗ ಶೀಟ್ ಸಹಾಯದಿಂದ ಅವಳನ್ನು ಹಿಡಿಯಲು ಸಜ್ಜಾಗಿ ನಿಂತ್ರು. ಸ್ಥಳೀಯ ಪೊಲೀಸರು ಹಾಗೂ ಆಂಬ್ಯುಲೆನ್ಸ್ ಅನ್ನು ಕೂಡ ಸ್ಥಳಕ್ಕೆ ಕರೆಸಲಾಯ್ತು.
ಯೋಧರೊಂದಿಗೆ ಮಾತನಾಡುತ್ತಲೇ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕೆಳಕ್ಕೆ ಜಿಗಿದುಬಿಟ್ಟಿದ್ದಾಳೆ. ಕೆಳಗೆ ನಿಂತಿದ್ದ ಸಿಬ್ಬಂದಿ ದಪ್ಪನೆಯ ಕಂಬಳಿಯಲ್ಲಿ ಅವಳನ್ನು ಹಿಡಿದಿದ್ದಾರೆ. ಹಾಗಾಗಿ ಅವಳಿಗೆ ಪ್ರಾಣಾಪಾಯವಾಗಿಲ್ಲ. ಕಾಲಿಗೆ ಸ್ವಲ್ಪ ಗಾಯವಾಗಿದೆ. ಕೂಡಲೇ ಅವಳನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯುವತಿ ಸದ್ಯ ಆರೋಗ್ಯವಾಗಿದ್ದು, ಆತ್ಮಹತ್ಯೆಗೆ ಯತ್ನಿಸಲು ಕಾರಣ ಏನೆಂದು ಪೊಲೀಸರು ಪತ್ತೆ ಮಾಡ್ತಿದ್ದಾರೆ.