ಕೊರೋನಾ ಬಂದ ನಂತರ ದೈನಂದಿನ ಜೀವನ ಶೈಲಿಯಲ್ಲಿ ಅನೇಕ ಬದಲಾವಣೆಗಳಾಗಿವೆ. ಕೊರೋನಾ ಕಾಲಘಟ್ಟದಲ್ಲಿ ಪರ್ಯಾಯ ಪ್ರಪಂಚವೇ ಸೃಷ್ಟಿಯಾದಂತಿದೆ. ಆನ್ಲೈನ್ ಮೀಟಿಂಗ್, ವರ್ಚುಯಲ್ ಸಭೆಗಳು ಹೀಗೆ ಹೊಸದಾಗಿ ವರ್ಚುಯಲ್ ವರ್ಲ್ಡ್ ಸೃಷ್ಟಿಯಾದಂತಿದೆ.
ಹೀಗಿರುವಾಗಲೇ ‘ಮೆಟಾವರ್ಸ್’ ಗೆ ಸೇರ್ಪಡೆಯಾದ 60 ಸೆಕೆಂಡ್ ಗಳಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆಸಲಾಗಿದೆ. ಮೊದಲೇ ಹೇಳಿದಂತೆ ಭೌತಿಕವಾಗಿ ಅಲ್ಲ, ವರ್ಚುಯಲ್ ಆಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ಮೆಟಾವರ್ಸ್ ಆಪ್ ದುರ್ಬಳಕೆ ಮಾಡಿಕೊಂಡ 4 -5 ಮಂದಿ ಇಂತಹ ಕೃತ್ಯವೆಸಗಿದ್ದಾರೆ. ನಾನು ಮೌಖಿಕವಾಗಿ, ಲೈಂಗಿಕವಾಗಿ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು 43 ವರ್ಷದ ನೀನಾ ಜೇನ್ ಪಟೇಲ್ ಅವರು ಹೇಳಿಕೊಂಡಿದ್ದಾರೆ.
ಇಂತಹ ಭಯಾನಕ ಅನುಭವ ನಾನು ಮೆಟಾವರ್ಸ್ ಗೆ ಸೇರ್ಪಡೆಯಾದ 60 ಸೆಕೆಂಡ್ ನಲ್ಲಿ ನಡೆದುಹೋಗಿದೆ. ಸುರಕ್ಷತೆ ಕಾಯ್ದುಕೊಳ್ಳುವ ಮೊದಲೇ ಈ ರೀತಿಯಾಗಿದೆ. ಬಳಕೆದಾರರು ಕೆಲವೊಮ್ಮೆ ಈ ರೀತಿ ವೇದಿಕೆ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ನೀನಾ ಜೇನ್ ಪಟೇಲ್ ತಿಳಿಸಿದ್ದಾರೆ.
ಇದರ ವಿರುದ್ಧ ಉದ್ಯಮ ಒಗ್ಗೂಡಬೇಕು. ನೆಟ್ ವರ್ಕ್ ನಲ್ಲಿ ಕಿರುಕುಳ ತಪ್ಪಿಸಲು ಭದ್ರತಾ ಮತ್ತು ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕೆಂದು ಅವರು ಹೇಳಿದ್ದಾರೆ. ಆಕೆಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮೆಟಾ ವಕ್ತಾರರು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಗತ್ಯ ಸುರಕ್ಷತಾ ಕ್ರಮಗಳನ್ನು ಬಳಕೆದಾರರಿಗೆ ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ.