ಆಪಲ್ ಇಂಕ್ ಹಾಗೂ ಮೆಟಾ ಕಂಪನಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಆಪಲ್ ಇಂಕ್ ನಿಂದ ಉದ್ಯೋಗ ತೊರೆದು ಮೆಟಾ ಸೇರುವುದನ್ನು ತಡೆಯುವುದಕ್ಕಾಗಿ ಕಂಪನಿಯು ತನ್ನ ಉದ್ಯೋಗಿಗಳಿಗೆ $1,80,000 ವರೆಗೆ ಭರ್ಜರಿ ಬೋನಸ್‌ಗಳನ್ನು ನೀಡಿದೆ.
ವರದಿಯ ಪ್ರಕಾರ, ಉದ್ಯೋಗಿಗಳು ತಮ್ಮ ಕಂಪನಿಯಲ್ಲೇ ಉಳಿಯುವುದಕ್ಕಾಗಿ $50,000 ರಿಂದ $1,80,000 ವರೆಗಿನ ಬೋನಸ್‌ಗಳ ರೂಪದಲ್ಲಿ ನೀಡಲಾಗಿದೆ. ಉತ್ತಮ ಕಾರ್ಯಕ್ಷಮತೆ ತೋರಿದವರಿಗೆ ಬಹುಮಾನ ನೀಡಲಾಗಿದೆ. ಕಳೆದ ಕೆಲವು ವಾರಗಳಲ್ಲಿ ಮೆಟಾ ಕಂಪನಿಯು ಆಪಲ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಸುಮಾರು 100 ಎಂಜಿನಿಯರ್‌ಗಳನ್ನು ನೇಮಿಸಿಕೊಂಡಿದೆ. ಇದೀಗ ಆಪಲ್ ಕೂಡ ಅದೇ ಹಾದಿ ತುಳಿಯಲು ಪ್ರಯತ್ನಿಸುತ್ತಿದೆ. ಹೀಗಾಗಿ ವಿಶ್ವದ ಎರಡು ದೊಡ್ಡ ಕಂಪನಿಗಳ ನಡುವೆ ಯುದ್ಧದ ಕಾರ್ಮೋಡ ಕವಿದಂತಾಗಿದೆ.
ಆಪಲ್ ಕಂಪನಿಯು ಸಾಮಾನ್ಯವಾಗಿ ನಗದು ಬೋನಸ್‌ಗಳನ್ನು ನೀಡುತ್ತದೆ. ಆದರೆ, ಅಂತಹ ಪ್ರಮಾಣದ ಸ್ಟಾಕ್ ಬೋನಸ್‌ಗಳು ಅಭೂತಪೂರ್ವವಾಗಿವೆ. ಆಪಲ್ ಷೇರುಗಳು ಏರುತ್ತಿರುವುದರಿಂದ, ಷೇರುಗಳ ಮೌಲ್ಯವು ಏರಿಕೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷದಲ್ಲಿ ಕಂಪನಿಯ ಷೇರುಗಳು ಶೇಕಡಾ 36 ರಷ್ಟು ಗಳಿಸಿವೆ.
ಈ ಮಧ್ಯೆ ಮೆಟಾ ಕೂಡ ತನ್ನ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಅವರ ಸಂಬಳವನ್ನು ಹೆಚ್ಚಿಸಿದೆ. ಇಷ್ಟಾದ್ರೂ ಆಪಲ್ ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಲವಾರು ಉದ್ಯೋಗಿಗಳು ಕಂಪನಿ ತೊರೆಯುತ್ತಿದ್ದಾರೆ. ಕೆಲಸಕ್ಕೆ ಸಂಬಂಧಿಸಿದ ನಿಯಮಗಳ ಬದಲಾವಣೆಯಿಂದಾಗಿ ಅನೇಕ ಎಂಜಿನಿಯರ್‌ಗಳು ಕಂಪನಿಯನ್ನು ತೊರೆಯುವಂತೆ ಮಾಡಿದೆ.
ಕಂಪನಿಯ ಕಾರ್ಪೊರೇಟ್ ಉದ್ಯೋಗಿಗಳು ವಾರದಲ್ಲಿ ಕನಿಷ್ಠ ಮೂರು ದಿನ ಕಚೇರಿಯಿಂದ ಕೆಲಸ ಮಾಡಬೇಕಾಗುತ್ತದೆ. ಮತ್ತೊಂದೆಡೆ, ಹಾರ್ಡ್‌ವೇರ್ ಎಂಜಿನಿಯರ್‌ಗಳು ವಾರಕ್ಕೆ ನಾಲ್ಕರಿಂದ ಐದು ಬಾರಿ ಕಚೇರಿಗೆ ಹಾಜರಾಗಬೇಕಾಗುತ್ತದೆ.