ಬೆಂಗಳೂರಿನಿಂದ ಧಾರವಾಡಕ್ಕೆ ಸಂಚರಿಸುವ ‘ವಂದೇ ಭಾರತ್’ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಚಾಲನೆ ನೀಡಿದ್ದಾರೆ. ಈ ಮೂಲಕ ಕರ್ನಾಟಕದ ಜನತೆಯ ಬೇಡಿಕೆಗೆ ರೈಲ್ವೆ ಇಲಾಖೆ ಸ್ಪಂದಿಸಿದ್ದು, ಆದರೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಟಿಕೆಟ್ ದರ ನೋಡಿ ಜನಸಾಮಾನ್ಯರು ಹೌಹಾರಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ನಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ಎಸಿ ಚೇರ್ ಕಾರ್ ಟಿಕೆಟ್ ದರ 410 ರೂಪಾಯಿಗಳಾಗಿದ್ದು, ಎಕ್ಸಿಕ್ಯೂಟಿವ್ ಕ್ಲಾಸ್ ನಲ್ಲಿ 545 ರೂಪಾಯಿಗಳಾಗಿದೆ. ಇನ್ನು ಮೆಜೆಸ್ಟಿಕ್ ನಿಂದ ದಾವಣಗೆರೆಗೆ ಎಸಿ ಚೇರ್ ಕಾರ್ ನಲ್ಲಿ ಟಿಕೆಟ್ ದರ 915 ರೂಪಾಯಿಗಳಿದ್ದು, ಎಕ್ಸಿಕ್ಯೂಟಿವ್ ಕ್ಲಾಸ್ ನಲ್ಲಿ 1740 ರೂಪಾಯಿ ತೆರಬೇಕಾಗಿದೆ.
ಇನ್ನು ಮೆಜೆಸ್ಟಿಕ್ ನಿಂದ ಹುಬ್ಬಳ್ಳಿ ಜಂಕ್ಷನ್ ಗೆ ಎಸಿ ಚೇರ್ ಕಾರ್ ನಲ್ಲಿ ಟಿಕೆಟ್ ದರ 1135 ರೂಪಾಯಿಗಳಿದ್ದರೆ ಎಕ್ಸಿಕ್ಯೂಟಿವ್ ಕ್ಲಾಸ್ ನಲ್ಲಿ 2180 ರೂಪಾಯಿಗಳಾಗಿದೆ.
ಹಾಗೆಯೇ ಧಾರವಾಡದಿಂದ ಬೆಂಗಳೂರು ಮೆಜೆಸ್ಟಿಕ್ ಗೆ ಎಸಿ ಚೇರ್ ಕಾರ್ ನಲ್ಲಿ 1330 ರೂಪಾಯಿಗಳಾಗಿದ್ದು ಎಕ್ಸಿಕ್ಯೂಟಿವ್ ಕ್ಲಾಸ್ ನಲ್ಲಿ ಪ್ರಯಾಣಿಸಲು 2440 ರೂಪಾಯಿ ನಿಗದಿಪಡಿಸಲಾಗಿದೆ. ಧಾರವಾಡದಿಂದ ಯಶವಂತಪುರಕ್ಕೆ ಎಸಿ ಚೇರ್ ಕಾರ್ ಗೆ 1340 ರೂಪಾಯಿಗಳಾಗಿದ್ದು, ಎಕ್ಸಿಕ್ಯೂಟಿವ್ ಕ್ಲಾಸ್ ನಲ್ಲಿ 2440 ರೂಪಾಯಿಗಳಾಗಿದೆ.
ಇನ್ನು ಧಾರವಾಡದಿಂದ ದಾವಣಗೆರೆಗೆ ಎಸಿ ಚೇರ್ ಕಾರ್ ನಲ್ಲಿ 745 ಪ್ರಯಾಣ ದರವಿದ್ದು ಎಕ್ಸಿಕ್ಯೂಟಿವ್ ಕ್ಲಾಸ್ ನಲ್ಲಿ ಪ್ರಯಾಣಿಸಲು 1282 ರೂಪಾಯಿ ತೆರಬೇಕಾಗಿದೆ. ಇನ್ನು ಧಾರವಾಡದಿಂದ ಹುಬ್ಬಳ್ಳಿ ಜಂಕ್ಷನ್ ಗೆ ಎಸಿ ಚೇರ್ ಕಾರ್ ನಲ್ಲಿ 410 ರೂಪಾಯಿ ಹಾಗೂ ಎಕ್ಸಿಕ್ಯೂಟಿವ್ ಕ್ಲಾಸ್ ನಲ್ಲಿ 545 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ.
ಈ ಟಿಕೆಟ್ ದರ ನೋಡಿ ಹೌಹಾರಿರುವ ಜನಸಾಮಾನ್ಯರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಕೇವಲ ಸಿರಿವಂತ ವರ್ಗಕ್ಕೆ ಮಾತ್ರ ಮೀಸಲೇ ಎಂದು ಪ್ರಶ್ನಿಸುತ್ತಿದ್ದಾರೆ.