ಮೆಕ್‌ಡೊನಾಲ್ಡ್ಸ್ ಗ್ರಾಹಕರಿಗೆ ನೀಡಿದ ತಂಪು ಪಾನೀಯದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದಂತೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್, ಸೋಲಾದಲ್ಲಿರೋ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್‌ಗೆ ಬೀಗ ಜಡಿದಿದೆ.
ಭಾರ್ಗವ ಜೋಶಿ ಎಂಬ ಯುವಕ ಮೆಕ್‌ಡೊನಾಲ್ಡ್ಸ್‌ನಿಂದ ತಂಪು ಪಾನೀಯ ತರಿಸಿದ್ದ. ಅದರಲ್ಲಿ ಸತ್ತ ಹಲ್ಲಿಯೊಂದು ಬಿದ್ದುಕೊಂಡಿತ್ತು. ಈ ವಿಡಿಯೋವನ್ನು ಭಾರ್ಗವ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾನೆ.
ಭಾರ್ಗವ್ ಮತ್ತಾತನ ಸ್ನೇಹಿತರು ಈ ಬಗ್ಗೆ ದೂರು ನೀಡಲು ಸೋಲಾದಲ್ಲಿರುವ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್‌ಗೂ ತೆರಳಿದ್ದರು. ಆದ್ರೆ 4 ಗಂಟೆ ಕಾದರೂ ಮೆಕ್‌ಡೊನಾಲ್ಡ್ಸ್ ಅಧಿಕಾರಿಗಳು ಅಥವಾ ಸಿಬ್ಬಂದಿ ದೂರು ಸ್ವೀಕರಿಸಿರಲಿಲ್ಲ. ಬದಲಾಗಿ ಭಾರ್ಗವ್‌ಗೆ 300 ರೂಪಾಯಿ ಮರುಪಾವತಿ ಮಾಡಿ ಕಳಿಸಿಕೊಟ್ಟಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಆಹಾರ ಸುರಕ್ಷತಾ ಅಧಿಕಾರಿ ದೇವಾಂಗ್ ಪಟೇಲ್, ಅದೇ ಔಟ್‌ಲೆಟ್‌ನಿಂದ ತಂಪು ಪಾನೀಯದ ಮಾದರಿ ತರಿಸಿಕೊಂಡು ಅಹಮದಾಬಾದ್‌ನ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್‌ಗೆ ಬೀಗ ಜಡಿದಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಮೆಕ್‌ಡೊನಾಲ್ಡ್ಸ್, ಗ್ರಾಹಕರ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಗುಣಮಟ್ಟ, ಸೇವೆ, ಶುಚಿತ್ವ ಮತ್ತು ಮೌಲ್ಯವು ನಮ್ಮ ಆದ್ಯತೆ ಎಂದು ಹೇಳಿಕೊಂಡಿದೆ. ಘಟನೆ ಬಗ್ಗೆ ತನಿಖೆ ನಡೆಸ್ತಿರೋದಾಗಿ ಹೇಳಿದೆ.