ಮೆಂತೆಸೊಪ್ಪು ಬಳಸದ ಮನೆ ಇರಲಿಕ್ಕಿಲ್ಲವೇನೋ. ಅದರಲ್ಲೂ ಮನೆಯಲ್ಲೊಬ್ಬರು ಮಧುಮೇಹಿಗಳಿದ್ದರೆ ಇದು ವಾರಕ್ಕೆರಡು ಬಾರಿ ಪದಾರ್ಥವಾಗಿ ಬಳಕೆಯಾಗುತ್ತಿರುತ್ತದೆ. ಇದರಿಂದ ಆರೋಗ್ಯ ಮಾತ್ರವಲ್ಲ ಸೌಂದರ್ಯವೂ ವೃದ್ಧಿಯಾಗುತ್ತದೆ ಎಂಬುದು ನಿಮಗೆ ಗೊತ್ತೇ…?
ತ್ವಚೆಯ ಮೇಲಿನ ಕಲೆಗಳನ್ನು ನಿವಾರಿಸಲು ಇದು ನೆರವಾಗುತ್ತದೆ. ಮೊಡವೆಗಳು ಬಂದ ಹೋದ ಬಳಿಕ ಉಳಿಯುವ ಕಲೆಗಳ ನಿವಾರಣೆಗೆ ಮೆಂತೆ ಸೊಪ್ಪಿಗೆ ನೀರು ಬೆರೆಸಿ ತಯಾರಿಸಿದ ಪೇಸ್ಟ್ ಅನ್ನು ಬಳಸಿ ನೋಡಿ. ಹದಿನೈದು ನಿಮಿಷದ ಬಳಿಕ ಮುಖ ತೊಳೆದರೆ ನಿಮ್ಮ ತ್ವಚೆಗೆ ಹೊಳಪು ಸಿಗುತ್ತದೆ.
ಮೆಂತೆ ಸೊಪ್ಪನ್ನು ನಿಯಮಿತವಾಗಿ ಬಳಸುವುದರಿಂದ ಉದ್ದನೆಯ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು. ಮೆಂತೆ ಪುಡಿಯನ್ನು ನಿಮ್ಮ ತಲೆಗೆ ಹಚ್ಚಿ 30 ನಿಮಿಷಗಳ ಬಳಿಕ ತಲೆ ತೊಳೆಯಿರಿ. ಈ ಪುಡಿಯೊಂದಿಗೆ ಮಹೆಂದಿ ಎಲೆ, ಕರಿಬೇವಿನ ಸೊಪ್ಪು, ದಾಸವಾಳದ ಎಲೆ ಹಾಗೂ ತೆಂಗಿನೆಣ್ಣೆ ಬಿಸಿ ಮಾಡಿ ಹಚ್ಚಿದರೆ ದಪ್ಪವಾದ ನೀಳ ಕೂದಲು ಬೆಳೆಯುತ್ತದೆ.
ಮೆಂತೆಸೊಪ್ಪು ಮಧುಮೇಹಿಗಳಿಗೆ ಅದರಲ್ಲೂ ಟೈಪ್ 1, ಟೈಪ್ 2 ನಿಂದ ಬಳಲುತ್ತಿರುವವರಿಗೆ ಹೇಳಿ ಮಾಡಿಸಿದ ಆಹಾರ. ಇದರಲ್ಲಿ ಅಂಟಿ ಅಕ್ಸಿಡೆಂಟ್ ಗಳು ಹೇರಳವಾಗಿವೆ. ಇದರಲ್ಲಿ ಕ್ಯಾಲೊರಿ ಪ್ರಮಾಣ ಕಡಿಮೆ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ಕರಗುವ ನಾರು ಇದೆ. ಇದು ಹೆಚ್ಚು ಸಮಯದ ತನಕ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹಾಗಾಗಿ ದೇಹ ತೂಕ ಇಳಿಸುವವರಿಗೆ ಇದು ಹೇಳಿ ಮಾಡಿಸಿದ ಆಹಾರ. ಇದು ನಿಮ್ಮ ದೇಹವನ್ನು ಆರೋಗ್ಯದಲ್ಲಿ ಇರುವಂತೆಯೂ ನೋಡಿಕೊಳ್ಳುತ್ತದೆ.