ಎಲ್ಲರ ಅಡುಗೆ ಮನೆಯಲ್ಲಿ ಮೆಂತೆ ಇದ್ದೇ ಇರುತ್ತದೆ. ಅದರೆ ಇದರ ಬಹೂಪಯೋಗಗಳ ಬಗ್ಗೆ ನಿಮಗೆ ಗೊತ್ತೇ?
ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಮೆಂತೆ ಕಾಳು ಅತ್ಯುತ್ತಮ ಮದ್ದು. ಇದು ದೇಹದಲ್ಲಿರುವ ಅನಗತ್ಯ ಅಂಶಗಳನ್ನು ಹೊರ ಹಾಕುತ್ತದೆ. ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ.
ಮಗುವಿಗೆ ಹಾಲೂಡಿಸುವ ತಾಯಂದಿರು ಬೇರೆ ಬೇರೆ ರೂಪದಲ್ಲಿ ಮೆಂತೆಯನ್ನು ಸೇವಿಸುವುದರಿಂದ ಎದೆಹಾಲು ಹೆಚ್ಚುತ್ತದೆ. ಅದೇ ಕಾರಣಕ್ಕೆ ಬಾಣಂತಿಗೆ ಮೆಂತೆ ಮದ್ದು ಮಾಡಿ ಕೊಡಲಾಗುತ್ತದೆ.
ಇದನ್ನು ತುಸು ಬಿಸಿ ಮಾಡಿ ಪುಡಿ ಮಾಡಿ ಇಟ್ಟುಕೊಳ್ಳಿ. ದಿನಂಪ್ರತಿ ಎದ್ದಾಕ್ಷಣ ಬಿಸಿನೀರಿಗೆ ಎರಡು ಚಿಟಿಕೆ ಪುಡಿ ಉದುರಿಸಿ ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಮೆಂತೆಯಲ್ಲಿರುವ ಕ್ಯಾಲ್ಸಿಯಂ ಅಂಶ ಎದೆಯುರಿ ಕಡಿಮೆ ಮಾಡುತ್ತದೆ.
ದೇಹ ತೂಕ ಇಳಿಸಲು ಇದು ಸಹಕಾರಿ. ಹಿಂದಿನ ದಿನ ನೆನೆಸಿಟ್ಟ ಮೆಂತೆ ಕಾಳಿನ ನೀರನ್ನು ಕುಡಿಯುವುದರಿಂದ ಹಾಗೂ ಕಾಳನ್ನು ತಿನ್ನುವುದರಿಂದ ದೇಹ ತೂಕವನ್ನು ಇಳಿಸಬಹುದು.