ಮನೆಯಲ್ಲಿ ಮೆಂತೆಸೊಪ್ಪು ತಂದಿದ್ದು ಇದ್ದರೆ ಅದರಿಂದ ರುಚಿಕರವಾದ ದೋಸೆ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು, ಹಾಗೇ ದೋಸೆ ಕೂಡ ರುಚಿಯಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
ಮೆಂತೆ ಸೊಪ್ಪು – 2 ಕಪ್, ದೋಸೆ ಅಕ್ಕಿ – 1/2 ಕಪ್, ಬ್ಯಾಡಗಿ ಮೆಣಸು – 5, ಹುಣಸೆಹಣ್ಣಿನ ರಸ – 1 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ತೆಂಗಿನಕಾಯಿ ತುರಿ – 3 ಟೇಬಲ್ ಸ್ಪೂನ್, ಇಂಗು – ಚಿಟಿಕೆ, ಅರಿಶಿನ – ಚಿಟಿಕೆ, ಎಣ್ಣೆ -ಸ್ವಲ್ಪ.
ಮಾಡುವ ವಿಧಾನ:
ಅಕ್ಕಿಯನ್ನು ಚೆನ್ನಾಗಿ ತೊಳೆದು 4 ಗಂಟೆಗಳ ಕಾಲ ನೆನೆಸಿಡಿ. ಮೆಣಸಿಗೆ ಸ್ವಲ್ಪ ಎಣ್ಣೆ ಸೇರಿಸಿ 3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಮಿಕ್ಸಿಗೆ ಅಕ್ಕಿ, ಮೆಣಸು, ಅರಿಶಿನ , ಹುಣಸೆಹಣ್ಣಿನ ರಸ, ಉಪ್ಪು, ತೆಂಗಿನಕಾಯಿ ತುರಿ ಸೇರಿಸಿಕೊಂಡು ಸ್ವಲ್ಪ ನೀರು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಮೆಂತೆಸೊಪ್ಪನ್ನು ಕತ್ತರಿಸಿ ಹಾಕಿ ಮಿಕ್ಸ್ ಮಾಡಿ.
ಗ್ಯಾಸ್ ಮೇಲೆ ದೋಸೆ ತವಾ ಇಟ್ಟು ಅದಕ್ಕೆ ತುಸು ಎಣ್ಣೆ ಸವರಿ ಒಂದೊಂದೇ ಸೌಟು ದೋಸೆ ಹಿಟ್ಟು ಹಾಕಿ ಚಿಕ್ಕ ಚಿಕ್ಕ ದೋಸೆ ಮಾಡಿಕೊಳ್ಳಿ. ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಂಡರೆ ರುಚಿರವಾದ ದೋಸೆ ತಯಾರಾಗುತ್ತದೆ.