ಚಪಾತಿ ಅಥವಾ ರೊಟ್ಟಿ ರುಚಿ ಬಲು ಚೆಂದ. ಆದರೆ ಗಟ್ಟಿ ಇದ್ದರೆ ತಿನ್ನಲು ಕಷ್ಟ. ಕೆಲ ಸರಳ ವಿಧಾನ ಅನುಸರಿಸಿ ಇವುಗಳನ್ನು ತಯಾರು ಮಾಡುವುದರಿಂದ ಮೃದುವಾಗಿ ಸವಿಯಲು ಚೆನ್ನಾಗಿರುತ್ತೆ. ಆ ಟಿಪ್ಸ್ ಏನು ಅಂತ ನೋಡಿ.
* ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಕುದಿಸಿ, ಅದಕ್ಕೆ ಅಕ್ಕಿ ಹಿಟ್ಟನ್ನು ಹಾಕಿ ಕೆಲವು ನಿಮಿಷ ಬಿಟ್ಟು, ಹಿಟ್ಟನ್ನು ಕಲೆಸಿ ಚೆನ್ನಾಗಿ ನಾದಿ ರೊಟ್ಟಿ ಮಾಡಿದರೆ, ರೊಟ್ಟಿ ದೋಸೆಯಂತೆ ಮೃದುವಾಗಿ ಬರುತ್ತವೆ.
* ರೊಟ್ಟಿ ಹಿಟ್ಟನ್ನು ಕಲೆಸುವಾಗ ಅದಕ್ಕೆ ಒಂದೆರಡು ಚಮಚ ತುಪ್ಪ ಮತ್ತು ನೀರಿನ ಜೊತೆ ಹಾಲನ್ನು ಸೇರಿಸಿ ಕಲೆಸಿ ಚೆನ್ನಾಗಿ ನಾದಿ ರೊಟ್ಟಿ ಮಾಡಿದರೆ ರೊಟ್ಟಿಗಳು ಮೃದುವಾಗಿ ಬರುತ್ತದೆ ಮತ್ತು ಬೇಯಿಸುವಾಗ ಉಬ್ಬುತ್ತದೆ. ಇದೇ ರೀತಿ ಚಪಾತಿ ಹಿಟ್ಟನ್ನು ಕಲೆಸಿದರೆ ಚಪಾತಿಗಳು ಸಹ ಚೆನ್ನಾಗಿ ಮೃದುವಾಗಿ ಬರುತ್ತವೆ ಮತ್ತು ರುಚಿಯಾಗಿಯೂ ಇರುತ್ತದೆ.
* ಚಪಾತಿ ಹಿಟ್ಟನ್ನು ತುಂಬಾ ಹೊತ್ತಿನವರೆಗೂ ಕಲೆಸಿ ಇಡಬೇಡಿ. ಸ್ವಲ್ಪ ಹೊತ್ತು ಇಟ್ಟರೆ ಚಪಾತಿ ಮೃದುವಾಗಿ ಬರುತ್ತದೆ. ಆದರೆ ತುಂಬಾ ಹೊತ್ತು ಇಡುವುದರಿಂದ ಅದರಲ್ಲಿರುವ ಉತ್ತಮ ಸತ್ವಗಳೆಲ್ಲಾ ಹಾಳಾಗುತ್ತವೆ.
* ಚಪಾತಿ ಹಿಟ್ಟನ್ನು ಕಲೆಸಿ ಫ್ರಿಜ್‌ನಲ್ಲಿ ಇಟ್ಟು ಉಪಯೋಗಿಸಬೇಡಿ. ಫ್ರಿಜ್‌ನಲ್ಲಿಡುವುದರಿಂದ ಹಿಟ್ಟಿನ ಸತ್ವ ಹಾಳಾಗುತ್ತದೆ. ಚಪಾತಿ ಹಿಟ್ಟನ್ನು ಕಲಸಿ ಅರ್ಧ ಗಂಟೆ ಇಟ್ಟರೆ ಸಾಕು.
* ರಾಗಿ ರೊಟ್ಟಿ ತಯಾರಿಸುವಾಗ ರಾಗಿ ಹಿಟ್ಟಿನೊಂದಿಗೆ ಸ್ವಲ್ಪ ಗೋಧಿಹಿಟ್ಟು ಸೇರಿಸಿ ಕಲೆಸಿ ರೊಟ್ಟಿ ತಯಾರಿಸಿದರೆ ರೊಟ್ಟಿಗಳು ಮುರಿದುಕೊಳ್ಳದೆ ಚೆನ್ನಾಗಿ ಬರುತ್ತವೆ.
* ಯಾವುದೇ ತರಹದ ರೊಟ್ಟಿಗಳನ್ನು ತಯಾರಿಸುವಾಗ ಅದಕ್ಕೆ ಕೆಲವು ತರಕಾರಿ, ಸೊಪ್ಪು ಸೇರಿಸಿ ತಯಾರಿಸಿದರೆ, ರುಚಿಯೂ ಬೇರೆ ರೀತಿಯಾಗಿ ಚೆನ್ನಾಗಿರುತ್ತದೆ ಮತ್ತು ವಿಟಮಿನ್ಸ್, ಪ್ರೋಟೀನ್ ಸಿಗುತ್ತದೆ.