ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಕುರಿತಂತೆ ಒಂದೊಂದೇ ಸಂಗತಿಗಳು ಬಯಲಾಗುತ್ತಿವೆ. ಸ್ನೇಹಿತರಾದ ಪ್ರಶಾಂತ್ ಹಾಗೂ ಮೇದಪ್ಪನರೊಂದಿಗೆ ಪ್ರವಾಸದ ನೆಪದಲ್ಲಿ ಬಂದಿದ್ದ ಸಂತೋಷ್ ಪಾಟೀಲ್, ಆತ್ಮಹತ್ಯೆ ಮಾಡಿಕೊಳ್ಳಲೇಬೇಕೆಂದು ನಿರ್ಧರಿಸಿಕೊಂಡಿದ್ದರಾ ಎಂಬ ಅನುಮಾನ ಮೂಡಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಒಂದೇ ರೂಂ ಮಾಡಿಕೊಂಡು ಮತ್ತೊಂದು ಬೆಡ್ ಹಾಕಿಸಿಕೊಳ್ಳೋಣಾ ಎಂದು ಸ್ನೇಹಿತರು ಹೇಳಿದ ವೇಳೆ, ಬೇಡ ಮತ್ತೊಬ್ಬರು ಸ್ನೇಹಿತರು ಬರುವವರಿದ್ದಾರೆ ಎಂದು ಹೇಳಿ ಎರಡು ರೂಂ ಮಾಡಿದ್ದರೆನ್ನಲಾಗಿದೆ. ಅಲ್ಲದೇ ಸ್ನೇಹಿತರ ಜೊತೆ ಹೊರಗಡೆ ಹೋದ ವೇಳೆ ಮಾರ್ಗ ಮಧ್ಯೆ ನನಗೆ ಹೊಟ್ಟೆ ನೋಯುತ್ತಿದೆ. ಹಾಗಾಗಿ ಊಟ ಬೇಡ. ಜ್ಯೂಸ್ ಸಾಕು ಎಂದು ಹೇಳಿ ಪಾರ್ಸೆಲ್ ಮಾಡಿಸಿಕೊಂಡು ಬಂದಿದ್ದರೆನ್ನಲಾಗಿದೆ.
ವಿಷದ ಬಾಟಲಿಯನ್ನು ಸಂತೋಷ್ ಪಾಟೀಲ್ ಜೊತೆಯಲ್ಲೇ ತೆಗೆದುಕೊಂಡು ಬಂದಿದ್ದರಾ ಎಂಬ ಪ್ರಶ್ನೆಯೂ ಈಗ ಮೂಡಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಾಧ್ಯಮದವರು, ತಮ್ಮ ಸ್ನೇಹಿತರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಕ್ಕೋ ಏನೋ ಅವರ ಮೊಬೈಲ್ ನಲ್ಲಿ ಸುಮಾರು 88 ಮಿಸ್ಡ್ ಕಾಲ್ ಗಳು ದಾಖಲಾಗಿದ್ದವೆಂದು ಹೇಳಲಾಗಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಉಡುಪಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಇದರ ಬಳಿಕವೇ ಅಂತಿಮ ಸತ್ಯಾಸತ್ಯತೆ ತಿಳಿದುಬರಲಿದೆ.