ಚೆನ್ನೈ: ಹಲವರು ಸಾಕುಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆಯೇ ಕಾಣುತ್ತಾರೆ. ಅದರಲ್ಲೂ ಶ್ವಾನಗಳು ನಾವು ಅದನ್ನು ಎಷ್ಟು ಪ್ರೀತಿ ಮಾಡುತ್ತೇವೆಯೋ ಅದರ ನೂರು ಪಾಲು ಪ್ರೀತಿ ನಮಗೆ ನೀಡುತ್ತದೆ. ಪ್ರೀತಿಯಿಂದ ಸಾಕಿದ ಸಾಕುಪ್ರಾಣಿಗಳು ಸತ್ತು ಹೋದರೆ ಬಹಳ ದುಃಖವಾಗುತ್ತದೆ. ಅಂತಹ ಒಂದು ರೋಮಾಂಚನಕಾರಿ ಕಥೆಯಲ್ಲಿ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ನೀಡಿರೋ ಗೌರವ ನಿಮ್ಮ ಮನ ಕಲಕದೇ ಇರಲಾರದು.
ಹೌದು, ತಮಿಳುನಾಡಿನ ಶಿವಗಂಗೆಯ 82 ವರ್ಷದ ನಿವೃತ್ತ ಸರ್ಕಾರಿ ನೌಕರರಾಗಿರುವ ಮುತ್ತು ಎಂಬುವವರು, ತನ್ನ ಅತ್ಯಂತ ಪ್ರೀತಿಯ ಮತ್ತು ನಿಷ್ಠಾವಂತ ಒಡನಾಡಿಗೆ ಸೂಕ್ತವಾದ ಗೌರವ ನೀಡಿದ್ದಾರೆ. ಮೃತಪಟ್ಟ ಲ್ಯಾಬ್ರಡಾರ್ ಜಾತಿಯ ಟಾಮ್ ಶ್ವಾನದ ನೆನಪಿಗಾಗಿ ತನ್ನ ಕೃಷಿ ಭೂಮಿಯಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ. ನಾಯಿ ಸಾಯುವವರೆಗೂ ಅವರು ಟಾಮ್ನೊಂದಿಗೆ ಸುಮಾರು 11 ವರ್ಷಗಳ ಕಾಲ ವಾಸಿಸುತ್ತಿದ್ದರು.
ಒಂದು ವರ್ಷದ ಹಿಂದೆ ಟಾಮ್ ಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಸಾಕಷ್ಟು ಚಿಕಿತ್ಸೆ ನೀಡಿದ್ರೂ, ಫಲಕಾರಿಯಾಗಲಿಲ್ಲ. ಜನವರಿ 2021ರಲ್ಲಿ ಟಾಮ್ ಮೃತಪಟ್ಟಿದೆ. ಇದರಿಂದ ಮುತ್ತು ದುಃಖತಪ್ತರಾಗಿದ್ದರು. ಇದೀಗ ಟಾಮ್ ನೆನಪಿಗಾಗಿ 80,000 ರೂ.ಗಳನ್ನು ಖರ್ಚು ಮಾಡಿ ಶ್ವಾನದ ಅಮೃತಶಿಲೆಯ ಪ್ರತಿಮೆಯನ್ನು ಪಡೆದಿದ್ದಾರೆ. ನಂತರ ಶಿವಗಂಗಾ ಜಿಲ್ಲೆಯ ಮನಮದುರೈ ಬಳಿಯ ಬ್ರಾಹ್ಮಣಕುರಿಚಿಯ ತಮ್ಮ ಕೃಷಿ ಭೂಮಿಯಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ.
ಪ್ರತಿಮೆಗೆ ಪ್ರತಿದಿನ ನೈವೇದ್ಯವನ್ನು ಸಲ್ಲಿಸಲಾಗುತ್ತದೆ. ಟಾಮ್ನ ಮರಣದ ಒಂದು ವರ್ಷದ ನಂತರ ಜನವರಿಯಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಜನರು ಬಂದು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ದೇವಾಲಯವನ್ನು ತೆರೆಯಲಾಗಿದೆ.