ಓಡಿಶಾದಲ್ಲಿ ತುಂಬಿ ತುಳುಕುತ್ತಿದ್ದ ತೊರೆಯೊಂದರಲ್ಲಿ ಸೇತುವೆ ಕೂಡ ಇಲ್ಲದೇ ನೀರಿನಲ್ಲಿ ಈಜಿಕೊಂಡೇ ಮೃತದೇಹ ಸಾಗಿಸಿರುವ ಘಟನೆ ನಡೆದಿದೆ. ತೊರೆಯಲ್ಲಿ ಧಾರಾಕಾರ ಮಳೆಯಿಂದಾಗಿ ಕತ್ತಿನವರೆಗೂ ನೀರು ತುಂಬಿಕೊಂಡಿತ್ತು. ಅಂತಿಮ ವಿಧಿವಿಧಾನಗಳಿಗಾಗಿ ಕುಟುಂಬ ಸದಸ್ಯರು ತಮ್ಮ ಸಂಬಂಧಿಕನ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಬೇರೆ ಮಾರ್ಗವೇ ಇರಲಿಲ್ಲ.
ಚರಂಡಿ ತುಂಬಿ ಹರಿದಿದ್ದು, ಆ ಕೊಳಕು ನೀರಿನಲ್ಲಿ ಮುಳುಗಿಕೊಂಡೇ ಸಂಬಂಧಿಕರು ಮೃತದೇಹ ಸಾಗಿಸಿದ್ದಾರೆ. ಕಾಳಹಂಡಿ ಜಿಲ್ಲೆಯ ಗೋಲಮುಂಡ ಬ್ಲಾಕ್ ವ್ಯಾಪ್ತಿಯ ಬೆಹೆರಗುಡದಲ್ಲಿ ಈ ಘಟನೆ ನಡೆದಿದೆ.
ಭಾರೀ ಮಳೆ ಮತ್ತು ಪ್ರವಾಹದ ನಡುವೆಯೇ ಕುಟುಂಬ ಸದಸ್ಯರು ಹತ್ತಿರದ ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮೃತ ಸಂತಾ ರಾಣಾ ಅವರು ಪಾರ್ಶ್ವವಾಯು ಪೀಡಿತನಾಗಿದ್ದ. ಭಾರೀ ಮಳೆ ಮತ್ತು ಪ್ರವಾಹ ಸ್ಥಿತಿ ಅವರ ಅಂತ್ಯಕ್ರಿಯೆಗೇ ಅಡ್ಡಿಪಡಿಸಿದೆ. ತೊರೆಗೆ ಸೇತುವೆಯೊಂದನ್ನು ನಿರ್ಮಿಸಿದ್ದರೆ ಇಂಥಾ ದುಸ್ಥಿತಿ ಬರುತ್ತಿರಲಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಸೇತುವೆ ಸಂಪರ್ಕದ ಕೊರತೆಯಿಂದಾಗಿ ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹಿಂದೂ ಸಂಪ್ರದಾಯದಂತೆ ಸಹೋದರನ ಅಂತ್ಯಕ್ರಿಯೆಗಳನ್ನು ಮಾಡಬೇಕಾಗಿತ್ತು. ಹಾಗಾಗಿ ಶವವನ್ನು ಪ್ರಯಾಸಪಟ್ಟು ಹೊತ್ತೊಯ್ದು ಅಂತ್ಯಸಂಸ್ಕಾರ ಮಾಡಿದ್ದೇವೆ ಅಂತಾ ಮೃತನ ಸಹೋದರ ದುರ್ಯೋಧನ ರಾಣಾ ಹೇಳಿದ್ದಾರೆ.ಇಲ್ಲಿನ ನಿವಾಸಿ ನೇತಾ ನಾಯ್ಕ ಮಾತನಾಡಿ, ಹಲವು ವರ್ಷಗಳಿಂದ ಸಮಸ್ಯೆ ಹಾಗೆಯೇ ಇದೆ.
ಕಳೆದ 20-25 ವರ್ಷಗಳಿಂದ ನಾವು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಸೇತುವೆ ನಿರ್ಮಿಸಬೇಕೆಂಬುದು ನಮ್ಮ ಬಹುದಿನಗಳ ಬೇಡಿಕೆಯಾಗಿದೆ. ಆದರೆ ಸರಕಾರ ಇನ್ನೂ ಕ್ರಮಕೈಗೊಂಡಿಲ್ಲ ಎಂದಿದ್ದಾರೆ. ಸ್ಮಶಾನದ ಮೈದಾನವು ತೊರೆಯ ಇನ್ನೊಂದು ಬದಿಯಲ್ಲಿದೆ. ಗ್ರಾಮಸ್ಥರ ಕೃಷಿ ಸಂಸ್ಥೆಗಳು ಸಹ ಅಲ್ಲೇ ಇವೆ. ಹಾಗಾಗಿ ಅನಿವಾರ್ಯವಾಗಿ ಈ ತೊರೆಯನ್ನು ದಾಟಿ ಹೋಗಲೇಬೇಕು. ಪ್ರತಿ ಬಾರಿ ಮುಂಗಾರಿನಲ್ಲೂ ಇದೇ ರೀತಿಯ ಸಮಸ್ಯೆಯನ್ನು ಗ್ರಾಮಸ್ಥರು ಎದುರಿಸುತ್ತಿದ್ದಾರೆ.