ಹಿಂದು ಧರ್ಮದಲ್ಲಿ ಬಹುಪತ್ನಿತ್ವವೇ ಅಪರಾಧ. ಅಂಥದ್ರಲ್ಲಿ ಮಾಹಿತಿಯನ್ನೇ ನೀಡದೆ ಪಂಚಾಯ್ತಿ ಅಧಿಕಾರಿ ಮೂವರು ಪತ್ನಿಯರನ್ನು ಚುನಾವಣಾ ಕಣಕ್ಕಿಳಿಸಿದ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಎಂಬಲ್ಲಿ ನಡೆದಿದೆ.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಖರಾಮ್ ಸಿಂಗ್‌ಗೆ ಮೂವರು ಪತ್ನಿಯರು. ಈ ಪೈಕಿ ಇಬ್ಬರು ಪತ್ನಿಯರು ಸರ್‌ಪಂಚ್ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ. ಪರಸ್ಪರರ ವಿರುದ್ಧವೇ ಕಣಕ್ಕಿಳಿದಿದ್ದಾರೆ. ಚುನಾವಣೆಗೆ ಸಲ್ಲಿಸಿದ ನಾಮಪತ್ರದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಖರಾಮ್ ಸಿಂಗ್ ಅವರ ಹೆಸರನ್ನು ತಮ್ಮ ಪತಿ ಎಂದು ನಮೂದಿಸಿದ್ದಾರೆ.
ಈ ಹಿಂದೆ ಸರಾಯ್ ನಗರ ಪರಿಷತ್ತಿನ ಭಾಗವಾಗಿರುವ ಘೋಘ್ರಾ ಗ್ರಾಮ ಪಂಚಾಯತ್‌ನಲ್ಲಿ ನಿಯೋಜನೆಗೊಂಡಿದ್ದ ಸುಖರಾಮ್ ಸಿಂಗ್, ತಮ್ಮ ಇಬ್ಬರು ಪತ್ನಿಯರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದರೆ ಮೂರನೆ ಪತ್ನಿ ಗೀತಾ ಸಿಂಗ್ ಕೂಡ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಈ ಬಗ್ಗೆ ಮಾಹಿತಿಯನ್ನು ಮರೆಮಾಚಿದ್ದಾರೆ.
ಹಾಗಾಗಿ ಸುಖರಾಮ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ಡಿಯೋಸರ್‌ನ ಜನಪದ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಕೆ.ಸಿಂಗ್ ಅವರು ಈ ಕುರಿತಂತೆ ಜಿಲ್ಲಾ ಪಂಚಾಯತ್ ಸಿಇಒಗೆ ವರದಿ ಸಲ್ಲಿಸಿದ್ದಾರೆ. ಸುಖರಾಮ್ ಸಿಂಗ್ ವಿರುದ್ಧ ಅಮಾನತು ಸೇರಿದಂತೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ.
ಇಲಾಖೆಯ ಎಲ್ಲಾ ನೌಕರರು ತಮ್ಮ ಕುಟುಂಬದ ಸದಸ್ಯರು ಅಥವಾ ಸಂಬಂಧಿಕರು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದ್ದಾರೆ. ಘಟನೆ ಬೆಳಕಿಗೆ ಬಂದ ಬಳಿಕ ಸುಖರಾಮ್ ಸಿಂಗ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ನಂತರ ಜಿಲ್ಲಾ ಪಂಚಾಯಿತಿ ಸಿಇಒಗೆ ವರದಿ ಸಲ್ಲಿಸಿ, ಅಮಾನತು ಸೇರಿದಂತೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.
ಸುಖರಾಮ್ ಸಿಂಗ್ ಅವರ ಇಬ್ಬರು ಪತ್ನಿಯರಾದ ಕುಸುಕಲಿ ಸಿಂಗ್ ಮತ್ತು ಗೀತಾ ಸಿಂಗ್, ಪಿಪಾರ್ಖಾಡ್ ಗ್ರಾಮ ಪಂಚಾಯತ್‌ನ ಸರಪಂಚ್ ಹುದ್ದೆಗೆ ಪರಸ್ಪರರ ವಿರುದ್ಧವೇ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ಗೀತಾ ಸಿಂಗ್ ಅದೇ ಗ್ರಾಮದ ಸರಪಂಚ್ ಆಗಿದ್ದರು. ಸುಖರಾಮ್ ಸಿಂಗ್ ಅವರ ಮತ್ತೊಬ್ಬ ಪತ್ನಿ ಊರ್ಮಿಳಾ ಸಿಂಗ್ ಕೂಡ ಪೆದ್ರಾದಿಂದ ಜನಪದ ಪಂಚಾಯತ್ ಸದಸ್ಯ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.