ಝಜ್ಜರ್‌ನ ಜವಾಹರ ನವೋದಯ ವಿದ್ಯಾಲಯದಲ್ಲಿ ಓದ್ತಿರೋ 8ನೇ ತರಗತಿಯ ವಿದ್ಯಾರ್ಥಿ ಕಾರ್ತಿಕೇಯ ಜಖರ್, ಯಾವುದೇ ಮಾರ್ಗದರ್ಶನವಿಲ್ಲದೆ ಮೂರು ಕಲಿಕಾ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದ್ದಾನೆ. ಈ ಮೂಲಕ ಕಾರ್ತಿಕೇಯನ ಹೆಸರು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ. ಅಷ್ಟೇ ಅಲ್ಲ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಾರ್ತಿಕೇಯನಿಗೆ ಪ್ರವೇಶ ದೊರೆತಿದೆ.
ಕಾರ್ತಿಕೇಯನಿಗೆ ಕೇವಲ 12 ವರ್ಷ. ತಂದೆ ಅಜಿತ್ ಜಖರ್ ರೈತ. ಕೊರೊನಾ ಸಮಯದಲ್ಲಿ ಮಗನ ಆನ್‌ಲೈನ್ ಕ್ಲಾಸ್‌ಗಾಗಿ 10,000 ರೂಪಾಯಿಯ ಮೊಬೈಲ್ ಖರೀದಿಸಿಕೊಟ್ಟಿದ್ದರು. ಅದನ್ನೇ ಬಳಸಿಕೊಂಡು ಕಾರ್ತಿಕೇಯ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದ್ದಾನೆ. ಮೊದಲ ಅಪ್ಲಿಕೇಶನ್ ಲುಸೆಂಟ್ ಜಿ.ಕೆ. ಎಂಬ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದೆ.
ಎರಡನೇ ಅಪ್ಲಿಕೇಶನ್ ರಾಮ್ ಕಾರ್ತಿಕ್ ಲರ್ನಿಂಗ್ ಸೆಂಟರ್ ಆಗಿದ್ದು ಅದು ಕೋಡಿಂಗ್ ಮತ್ತು ಗ್ರಾಫಿಕ್ ಡಿಸೈನಿಂಗ್ ಅನ್ನು ಕಲಿಸುತ್ತದೆ. ಮೂರನೇ ಅಪ್ಲಿಕೇಶನ್ ಶ್ರೀ ರಾಮ್ ಕಾರ್ತಿಕ್ ಡಿಜಿಟಲ್ ಶಿಕ್ಷಣ. ಈಗ ಈ ಅಪ್ಲಿಕೇಶನ್‌ಗಳು 45,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಒತ್ತು ನೀಡಿದ್ದರಿಂದ ನನಗೆ ಪ್ರೇರಣೆ ಸಿಕ್ಕಿದೆ. ನಾನು ದೇಶಕ್ಕಾಗಿ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಕಾರ್ತಿಕೇಯ ಹೇಳಿದ್ದಾನೆ.
ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದ ಬೆನ್ನಲ್ಲೇ ಕಾರ್ತಿಕೇಯನಿಗೆ ಮುಂದಿನ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನವೂ ದೊರೆತಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಆತ ಹಾರ್ವರ್ಡ್ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ ಬಿಎಸ್ಸಿ ಓದುತ್ತಿದ್ದಾನೆ. ಮಗನಿಗೆ ಇತರ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಸಹಾಯ ಮಾಡಬೇಕೆಂದು ತಂದೆ ಅಜಿತ್ ಒತ್ತಾಯಿಸಿದ್ದಾರೆ. ಮಗ ಡಿಜಿಟಲ್ ತಂತ್ರಜ್ಞಾನದಲ್ಲಿ ದೇಶಕ್ಕೆ ಸೇವೆ ಸಲ್ಲಿಸಬೇಕೆಂಬುದು ಅವರ ಬಯಕೆ.
ಕಾರ್ತಿಕೇಯನ ಊರಲ್ಲಿ ಕರೆಂಟ್ ಖೋತಾ ಹೆಚ್ಚಾಗಿದೆ. ಆದ್ರೂ ಆತನ ಉತ್ಸಾಹಕ್ಕೆ ಭಂಗ ಬಂದಿಲ್ಲ. ಹರಿಯಾಣದ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ಮತ್ತು ಸಿಎಂ ಮನೋಹರ್ ಲಾಲ್ ಖಟ್ಟರ್ ಕೂಡ ಬಾಲಕನೊಂದಿಗೆ ಮಾತನಾಡಿದ್ದು, ಇನ್ನಷ್ಟು ಸಾಧನೆ ಮಾಡುವಂತೆ ಪ್ರೇರೇಪಿಸಿದ್ದಾರಂತೆ. ಸಿಎಂ ಖಟ್ಟರ್, ಕಾರ್ತಿಕೇಯನ ಸಾಧನೆ ಬಗ್ಗೆ ಟ್ಟೀಟ್ ಕೂಡ ಮಾಡಿದ್ದರು.