ಸಮಾಜದಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಇಂದಿಗೂ ಹೆಣ್ಣು – ಗಂಡಿನ ನಡುವಿನ ತಾರತಮ್ಯ ಹೋಗಲಾಡಿಸಲು ಆಗುತ್ತಿಲ್ಲ. ಈ ಘಟನೆಗೆ ಸಾಕ್ಷಿ ಎಂಬಂತೆ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬರು ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಇದರಿಂದಾಗಿ ಪತಿಯ ಕುಟುಂಬದಲ್ಲಿ ರಾದ್ಧಾಂತವೇ ನಡೆದಿತ್ತು. ಪತಿಯಿಂದ ಕೂಡ ಪತ್ನಿ ಹಿಂಸೆ ಅನುಭವಿಸಿದ್ದರು. ಈ ಭಯದಲ್ಲಿಯೇ ಮಹಿಳೆಗೆ ಮೂರನೇ ಹೆರಿಗೆ ಆಗಿತ್ತು. ಅದು ಕೂಡ ಹೆಣ್ಣು ಮಗುವೇ ಆಗಿತ್ತು. ಇದರಿಂದ ತೀವ್ರ ಆತಂಕ ಹಾಗೂ ಭಯದಲ್ಲಿದ್ದ ಮಹಿಳೆ ತಾನು ಹೆತ್ತ ಮಗವನ್ನು ಆಸ್ಪತ್ರೆಯ ಹೊರಗೆ ಬಿಟ್ಟು ಹೋಗಿದ್ದಳು.
ಆದರೂ ಕರುಳ ಬಳ್ಳಿಯ ಸಂಬಂಧ ಬಿಟ್ಟು ತಾಯಿಗೆ ಇರಲು ಆಗಿಲ್ಲ. ಹೀಗಾಗಿ ಪಶ್ಚಾತಾಪ ಪಟ್ಟು, ಪತಿಯ ಮನೆಯವರು ಏನೇ ಮಾಡಿದರೂ ಸರಿ ನನಗೆ ಮಗು ಬೇಕು ಎಂದು ಮರಳಿ ಬಂದಿದ್ದಾರೆ.
ಈ ಘಟನೆ ಚೆನ್ನೈನಲ್ಲಿ ನಡೆದಿದ್ದು, ಮಗುವನ್ನು ರಕ್ಷಿಸಿರುವ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹೆಣ್ಣು ಮಗು ಹುಟ್ಟಿದರೆ ಮನೆಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಪತಿ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಮಹಿಳೆ ಮಗುವನ್ನು ಆಸ್ಪತ್ರೆಯ ಹೊರಗೆ ಬಿಟ್ಟು ಹೋಗಿದ್ದಳು.
ಆಸ್ಪತ್ರೆಯ ಹೊರಗೆ ಅಳುತ್ತಿದ್ದ ಮಗುವನ್ನು ಗಮನಿಸಿದ ಕಟ್ಟಡ ಕಾರ್ಮಿಕರು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಧಾವಿಸಿದ ಪೊಲೀಸರು, ಹಸುಗೂಸನ್ನು ತಿರುಚ್ಚಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಅಲ್ಲದೇ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸಿದ್ದರು.
ಮಗುವನ್ನು ಬಿಟ್ಟು ಬಂದಿದ್ದ ಮಹಿಳೆ ಪಶ್ಚಾತಾಪದಲ್ಲಿ ನೊಂದು, ಪೊಲೀಸ್ ಠಾಣೆಗೆ ಬಂದಿದ್ದಾರೆ. ನಾನೇ ಮಗುವನ್ನು ಬಿಟ್ಟು ಹೋಗಿದ್ದು, ಪತಿಯ ಭಯದಿಂದಾಗಿ ಈ ರೀತಿ ಮಾಡಿದ್ದೇನೆ. ಹೀಗಾಗಿ ಮಗುವನ್ನು ಮರಳಿ ನೀಡುವಂತೆ ಮನವಿ ಮಾಡಿದ್ದಾಳೆ. ಸದ್ಯ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.