ಕಾಂಬೋಡಿಯಾದ ಪ್ರಧಾನಿ ಹುನ್ ಸೇನ್ ಅವರು ತಮ್ಮ ಅಧಿಕೃತ ಜನ್ಮ ದಿನಾಂಕವನ್ನೇ ಬದಲಾಯಿಸಲು ನಿರ್ಧರಿಸಿದ್ದಾರೆ. ಚೀನೀ ರಾಶಿಚಕ್ರದ ಕ್ಯಾಲೆಂಡರ್ ಪ್ರಕಾರ ಹೊಸ ಜನ್ಮ ದಿನಾಂಕವನ್ನು ದಾಖಲಿಸಿಕೊಳ್ಳಲಿದ್ದಾರೆ.
ಮೇ 5 ರಂದು ಪ್ರಧಾನಿ ಹುನ್‌ಸೇನ್ ಅವರ ಅಣ್ಣ ಸಾವನ್ನಪ್ಪಿದ್ದರು. ಅದಾದ ಬಳಿಕ ಜನ್ಮ ದಿನಾಂಕ ಬದಲು ಮಾಡಿಕೊಳ್ಳುವ ತಮ್ಮ ನಿರ್ಧಾರವನ್ನು ಪ್ರಧಾನಿ ಘೋಷಿಸಿದ್ದಾರೆ. ಹುನ್ ಸೇನ್ ಅವರ ಈ ನಿರ್ಧಾರಕ್ಕೆ ಕಾರಣ ಅವರಲ್ಲಿರೋ ಅತಿಯಾದ ಮೂಢನಂಬಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಚೀನಾದ ರಾಶಿಚಕ್ರದ ಕ್ಯಾಲೆಂಡರ್‌ಗೆ ಹೊಂದಿಕೆಯಾಗದ ತಪ್ಪಾದ ಜನ್ಮ ದಿನಾಂಕದಿಂದಾಗಿ ತನ್ನ ಸಹೋದರನ ಸಾವು ಸಂಭವಿಸಿದೆ ಎಂದವರು ಶಂಕಿಸಿದ್ದಾರೆ. ಸಿಂಗಾಪುರದಿಂದ ಹಿಂದಿರುಗಿದ 10 ದಿನಗಳ ನಂತರ, ಅವರ ಸಹೋದರ ಹೃದಯಾಘಾತದಿಂದ ನಿಧನರಾದರು.
ಹುನ್ ಸೇನ್ ಅವರು ಎರಡು ಜನ್ಮ ದಿನಾಂಕಗಳನ್ನು ಹೊಂದಿದ್ದರು, ಒಂದು ಏಪ್ರಿಲ್ 4, 1951. ಇನ್ನೊಂದು 1952ರ ಆಗಸ್ಟ್ 5. ಆಗಸ್ಟ್ 5ರ ದಿನಾಂಕ ಸರಿಯಾಗಿದೆ ಎನ್ನುತ್ತಿದ್ದಾರೆ ಕಾಂಬೋಡಿಯಾದ ಪ್ರಧಾನಿ. ಚೀನಾದ ರಾಶಿಚಕ್ರವನ್ನು ನಿರ್ಲಕ್ಷಿಸಬಾರದು ಎಂದು ಸಲಹೆ ಕೂಡ ಕೊಟ್ಟಿದ್ದಾರೆ. ಜನ್ಮ ದಿನಾಂಕ ಬದಲಾವಣೆ ಬಗ್ಗೆ ಈಗಾಗ್ಲೇ ನ್ಯಾಯಾಂಗ ಸಚಿವರೊಂದಿಗೆ ಚರ್ಚಿಸಿದ್ದಾರಂತೆ. ಜನ್ಮ ದಿನಾಂಕ ಬದಲಾಯಿಸುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಈ ಬಗ್ಗೆ ಸಾರ್ವಜನಿಕವಾಗಿ ಘೋಷಣೆ ಮಾಡಲಿದ್ದಾರೆ. ಮಿತ್ರರಾಷ್ಟ್ರಗಳಿಗೆ ಅಧಿಕೃತ ಟಿಪ್ಪಣಿಯನ್ನು ಕಳುಹಿಸಲಿದ್ದಾರೆ.