ರಾಜ್ಯದಲ್ಲಿ ಹಿಜಾಬ್ ವಿವಾದ ಬಹಳ ಕ್ಲಿಷ್ಟಕರ ಸನ್ನಿವೇಶ ತಲುಪಿದೆ. ಇದರಿಂದಾಗಿ ಮುಸ್ಲಿಂ ಸಮುದಾಯ ಆತಂಕದ ಸ್ಥಿತಿಯಲ್ಲಿದೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಾಅದಿ ಆತಂಕ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ವಿವಾದದ ಬಗ್ಗೆ ಮುಸ್ಲಿಂ ಮುಖಂಡರೊಂದಿಗೆ ಚರ್ಚೆ ನಡೆಸಿದ ಅವರು, ಸಭೆಯ ನಂತರ ಮಾತನಾಡಿದ್ದಾರೆ. ಶಿಯಾ, ಸುನ್ನಿ ಹೀಗೆ ಎಲ್ಲಾ ಧರ್ಮ ಗುರುಗಳ ಜೊತೆಗೆ ಚರ್ಚೆ ನಡೆಸಿದ್ದೇನೆ, ಹಿಜಾಬ್ ಧಾರಣೆ ಬಗ್ಗೆ ಸ್ಪಷ್ಟತೆ ಬೇಕಿದೆ ಎಂದಿದ್ದಾರೆ.
ಶಾಲಾ ಮತ್ತು ಕಾಲೇಜು ಕ್ಯಾಂಪಸ್ ಒಳಗೆ ಹಿಜಾಬ್ ಧರಿಸಲು ಅನುಮತಿ ಇದೆ. ಆದರೆ ವಿವಾದದ ಬೆನ್ನಲ್ಲಿ ಹಿಜಾಬ್ ಅನ್ನು ಕ್ಯಾಂಪಸ್ ಒಳಗೆ ಧರಿಸಲು ಅವಕಾಶ ನಿರಾಕರಿಸಲಾಗಿದೆ. ಈ ನಡೆ ನಮಗೆ ಬೇಸರ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
BIG NEWS: ಕೊಲ್ಕತ್ತಾ ನೈಟ್ ರೈಡರ್ಸ್ ನಾಯಕನಾಗಿ ಶ್ರೇಯಸ್ ಅಯ್ಯರ್
ತರಗತಿಯಲ್ಲಿ ಮಾತ್ರ ವಸ್ತ್ರ ಸಂಹಿತೆ ಇರುವುದಾಗಿ ಹೇಳಿಕೆ ನೀಡಲಾಗಿದೆ. ಕೋರ್ಟ್ ನ ಮಧ್ಯಂತರ ಆದೇಶ ಹಿನ್ನೆಲೆ ಹೇಳುವುದಾದರೆ, ಸಂವಿಧಾನದಲ್ಲಿ ಆರ್ಟಿಕಲ್ 14 ರಿಂದ 25ರ ವರೆಗೆ ಹಲವು ಹಕ್ಕುಗಳನ್ನು ನೀಡಿದೆ. ಆರ್ಟಿಕಲ್ 25ರಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ನೀಡಲಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ತೀರ್ಮಾನ ಮಾಡಬೇಕಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶಕ್ಕೆ ಈ ಕಾನೂನು ಅನ್ವಯ ಆಗಬೇಕು ಎಂದಿದ್ದಾರೆ.
ಪರ್ದಾ, ಹಿಜಾಬ್ ಇಸ್ಲಾಂನ ಷರಿಯತ್ ಕಾನೂನಿನ ಆಜ್ಞೆಯಾಗಿದೆ. ಇದರ ಹಿಂದೆ ಜೀವನದ ನಂಬಿಕೆ ಇದೆ. ಅದೇ ಕಾರಣಕ್ಕೆ ಮುಸ್ಲಿಂ ಮಹಿಳೆಯರಿಗೆ ಹಿಜಾಬ್, ಬುರ್ಖಾ ಕಡ್ಡಾಯವಾಗಿದೆ. ಇದನ್ನೂ ಸರ್ಕಾರ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಅಲ್ಲದೇ ಮಾಧ್ಯಮಗಳಲ್ಲಿ ಇಸ್ಲಾಂ ಬಗ್ಗೆ ತಿಳುವಳಿಕೆ ಇಲ್ಲದ ಜನರಿಂದ ಚರ್ಚೆ ನಡೆಸಲಾಗುತ್ತದೆ. ಹೀಗಾಗಿ ಬುರ್ಕಾ, ಹಿಜಾಬ್ ಬಗ್ಗೆ ಇಸ್ಲಾಂನ ನಿಲುವು ಏನು ಎಂಬುವುದು ಸ್ಪಷ್ಟವಾಗಿ ತಿಳಿಯಬೇಕೆಂದರೆ ವಕ್ಫ್ ಬೋರ್ಡ್ ಅನ್ನು ಸಂಪರ್ಕಿಸಿ. ವಕ್ಫ್ ಬೋರ್ಡ್ ನ ಅಡಿಯಲ್ಲಿ ಗುರುಗಳನ್ನು ಚಾನೆಲ್ ಚರ್ಚೆಗೆ ಕಳುಹಿಸಿಕೊಡಲಾಗುತ್ತೆ. ಅರ್ಧಂಬರ್ಧ ತಿಳಿದ ಜನರನ್ನು ಕರೆದು ತಪ್ಪು ಮಾಹಿತಿ ಹಂಚಬೇಡಿ ಎಂದು ಮಾಧ್ಯಮಗಳಿಗೆ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಮನವಿ ಮಾಡಿದ್ರು.