ಕರ್ನಾಟಕ ಸರ್ಕಾರ, ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇಕಡ 4 ಮೀಸಲು ರದ್ದುಪಡಿಸಿರುವ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದ್ದು, ಮಂಗಳವಾರದಂದು ಅರ್ಜಿದಾರರು ಮತ್ತು ಸರ್ಕಾರದ ಪರ ವಕೀಲರ ನಡುವೆ ಮಾತಿನ ಜಟಾಪಟಿ ನಡೆದಿದೆ.
ಮುಸ್ಲಿಂ ಮೀಸಲು ರದ್ದು ಆದೇಶಕ್ಕೆ ತಡೆ ನೀಡಿದ್ದ ಸುಪ್ರೀಂ ಕೋರ್ಟ್ ಅದನ್ನು ಈಗ ಮತ್ತಷ್ಟು ಕಾಲ ಮುಂದುವರಿಸಿದ್ದು ಜು.25 ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ. ಇದರ ಮಧ್ಯೆ ಮುಸ್ಲಿಂ ಕೋಟಾ ರದ್ದುಪಡಿಸಿರುವ ವಿಚಾರವನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಂಡ ಜನಪ್ರತಿನಿಧಿಗಳ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಅರ್ಜಿದಾರರ ಪರ ವಕೀಲರಾದ ದುಶ್ಯಂತ್ ದವೆ, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಸರ್ಕಾರ ಮುಸ್ಲಿಂ ಕೋಟಾ ರದ್ದುಪಡಿಸಿದೆ ಎಂಬ ಹೇಳಿಕೆ ನೀಡಿರುವ ಕುರಿತು ನ್ಯಾಯಾಲಯದ ಗಮನ ಸೆಳೆದಿದ್ದಾರೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಇರುವಾಗಲೇ ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ.