alex Certify ಮುಲಾಯಂ ರಾಜಕೀಯ ಪ್ರವೇಶಕ್ಕಾಗಿ ಒಪ್ಪೊತ್ತಿನ ಊಟ ತ್ಯಜಿಸಿದ್ದ ಗ್ರಾಮಸ್ಥರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಲಾಯಂ ರಾಜಕೀಯ ಪ್ರವೇಶಕ್ಕಾಗಿ ಒಪ್ಪೊತ್ತಿನ ಊಟ ತ್ಯಜಿಸಿದ್ದ ಗ್ರಾಮಸ್ಥರು….!

ಸಮಾಜವಾದಿ ಪಕ್ಷದ ಹಿರಿಯ ನೇತಾರ ಮುಲಾಯಂ ಸಿಂಗ್ ಯಾದವ್  ನಿಧನದಿಂದ ಅವರ ಹುಟ್ಟೂರು ಸೈಫೈ ಶೋಕ ಸಾಗರದಲ್ಲಿ ಮುಳುಗಿದೆ. ಭೂಮಿ ಪುತ್ರನೆಂದೇ ಕರೆಸಿಕೊಂಡಿದ್ದ ಮುಲಾಯಂರನ್ನು ಅಲ್ಲಿನ ಸ್ಥಳೀಯರು ನೆನೆದಿದ್ದಾರೆ. ‘ನೇತಾ ಜೀ’ ಶಾಸಕರಾಗಬೇಕೆಂಬ ಹಂಬಲ ಗ್ರಾಮಸ್ಥರಲ್ಲೂ ಇತ್ತು. ಮುಲಾಯಂ ಸಿಂಗ್‌ರ ರಾಜಕೀಯದ ಕನಸನ್ನು ನನಸು ಮಾಡಲು ಅಲ್ಲಿನ ಜನತೆ ಒಂದು ಹೊತ್ತು ಊಟವನ್ನೇ ತ್ಯಜಿಸಿ ಸಹಾಯ ಮಾಡಿದ್ದರು.

1967ರ ವಿಧಾನಸಭಾ ಚುನಾವಣೆಯ ಸಮಯ ಅದು. ಮುಲಾಯಂ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿದ್ದರು. ಆದರೆ ಹಣಕಾಸಿನ ಕೊರತೆ ಅವರನ್ನು ಕಾಡುತ್ತಿತ್ತು. ಗ್ರಾಮಸ್ಥರ ಜೊತೆಗಿನ ಸಭೆಯಲ್ಲಿ ಈ ವಿಚಾರವನ್ನು ಮುಲಾಯಂ ಹಂಚಿಕೊಂಡಿದ್ದಾರೆ.

ಸೋನೆಲಾಲ್ ಶಾಕ್ಯಾ ಎಂಬುವವರು ಮುಲಾಯಂ ಸಿಂಗ್‌ರ ಸಮಸ್ಯೆಗೆ ಪರಿಹಾರವೊಂದನ್ನು ಹುಡುಕಿದ್ರು. ಗ್ರಾಮಸ್ಥರು ದಿನಕ್ಕೆ ಒಂದು ಊಟವನ್ನು ತ್ಯಜಿಸಿದ್ರೆ ಆ ಹಣದಲ್ಲಿ ಮುಲಾಯಂ ಸಿಂಗ್‌ರ ಕಾರನ್ನು 8 ದಿನ ಓಡಿಸಬಹುದು. ಈ ಮೂಲಕ ಹಣಕಾಸಿನ ಬಿಕ್ಕಟ್ಟಿಲ್ಲದೇ ಅವರು ಚುನಾವಣಾ ಪ್ರಚಾರ ಮಾಡಬಹುದು ಅನ್ನೋದು ಅವರ ಐಡಿಯಾ. ಇದಕ್ಕೆ ಗ್ರಾಮಸ್ಥರೆಲ್ಲ ಸಮ್ಮತಿಸಿ ಊಟವನ್ನೇ ತ್ಯಾಗ ಮಾಡಿದ್ದರು.

ಈ ವಿಚಾರವನ್ನು ಸ್ಥಳೀಯರು ನೆನಪಿಸಿಕೊಂಡಿದ್ದಾರೆ. ಗ್ರಾಮಸ್ಥರ ಪ್ರಯತ್ನದ ಫಲವಾಗಿ ಯಾದವ್, ಮೊದಲ ಬಾರಿಗೆ ಇಟಾವಾ ಜಿಲ್ಲೆಯ ಜಸ್ವಂತ್ ನಗರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ತಮ್ಮ ಭಾಷಣದಲ್ಲಿ ಮುಲಾಯಂ ಜನರ ಬಳಿ “ಒಂದು ಮತ ಮತ್ತು ಒಂದು ರೂಪಾಯಿ ನೋಟು ” ನೀಡುವಂತೆ ಜನರಿಗೆ ಮನವಿ ಮಾಡುತ್ತಿದ್ದರು. ಶಾಸಕರಾದರೆ ಹಣವನ್ನು ಬಡ್ಡಿಯೊಂದಿಗೆ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ಅವರ ಭಾಷಣಗಳು ಅಪಾರ ಜನಸಮೂಹವನ್ನು ಆಕರ್ಷಿಸಿದವು. ಮುಲಾಯಂ ಸಿಂಗ್‌ಗೆ ಜನರೇ ಉದಾರವಾಗಿ ದೇಣಿಗೆ ನೀಡಿದರು.

ಮುಲಾಯಂ ರಾಜಕೀಯದಲ್ಲಿ ಹೋರಾಟಗಾರನೆನಿಸಿಕೊಂಡಿದ್ದರು. ಸ್ನೇಹಿತ ದರ್ಶನ್ ಸಿಂಗ್ ಅವರೊಂದಿಗೆ ಸೈಕಲ್‌ನಲ್ಲಿ ಪ್ರಚಾರ ಮಾಡುತ್ತಿದ್ದರು. ನಂತರ ದೇಣಿಗೆ ಹಣದಿಂದ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದರು. ಮುಲಾಯಂ ಸಿಂಗ್‌ರಿಗಾಗಿ ತನ್ನ ಸ್ಥಾನವನ್ನೇ ಬಿಟ್ಟುಕೊಟ್ಟಿದ್ದರು ಅಂದಿನ ಪ್ರಬಲ ನಾಯಕ ನಾಥು ಸಿಂಗ್. ಯಾದವ್ ವಿದ್ಯಾವಂತರಾಗಿದ್ದರಿಂದ ಅವರು ವಿಧಾನಸಭೆಗೆ ಹೋಗಬೇಕು ಎಂದು ನಾಥು ಸಿಂಗ್ ಅಭಿಪ್ರಾಯಪಟ್ಟರು.

ಸೈಫೈ ನಿವಾಸಿಗಳ ಪ್ರಕಾರ ಅವರು ತಮ್ಮ ಪ್ರೀತಿಪಾತ್ರರನ್ನು ಎಂದಿಗೂ ಮರೆಯಲಿಲ್ಲ. ರಾಜಕೀಯದಲ್ಲಿ ಯಶಸ್ಸನ್ನು ಸಾಧಿಸಿದ ನಂತರವೂ ಅವರು ತಮ್ಮ ಪರಿಚಯಸ್ಥರೊಂದಿಗೆ ಹಳೆಯ ಒಳ್ಳೆಯ ದಿನಗಳ ಬಗ್ಗೆ ಚರ್ಚಿಸುತ್ತಿದ್ದರು. ಯಾದವ್ಗೆ ಬಾಲ್ಯದಿಂದಲೂ ಕುಸ್ತಿಯೆಂದರೆ ತುಂಬಾ ಇಷ್ಟ. ಸಂಜೆ ಶಾಲೆಯಿಂದ ಹಿಂತಿರುಗಿದ ನಂತರ ಅಖಾಡದಲ್ಲಿ ಕುಸ್ತಿ ಮಾಡಿ ದೊಡ್ಡ ಕುಸ್ತಿಪಟುಗಳನ್ನು ಸೋಲಿಸುತ್ತಿದ್ದರು. ಮರಗಳನ್ನು ಹತ್ತಿ ಮಾವು, ಪೇರಲ, ಹಣ್ಣುಗಳನ್ನು ಕಿತ್ತು ಸ್ನೇಹಿತರಿಗೆ ಹಂಚುತ್ತಿದ್ದರು. ಹೀಗೆ ಸಾಮಾನ್ಯರಲ್ಲಿ ಸಾಮಾನ್ಯ ಬಾಲಕರಾಗಿದ್ದ ಮುಲಾಯಂ ಅದ್ಭುತ ವಾಗ್ಮಿಯಾಗಿ, ರಾಜಕೀಯ ಮುತ್ಸದ್ದಿಯಾಗಿ ಬದಲಾಗಿದ್ದು ಈಗ ಇತಿಹಾಸ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...