
ಸೂಕ್ಷ್ಮವಾಗಿರುವ ಬೆರಳ ತುದಿಯನ್ನು ರಕ್ಷಿಸಲೆಂದೇ ಇರುವ ಉಗುರುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದು ಬಹಳ ಮುಖ್ಯ, ಇದರ ಸರಿಯಾದ ಆರೈಕೆಯಿಂದ ನಿಮ್ಮ ಕೈಗಳ ಅಂದ ಹೆಚ್ಚುತ್ತದೆ. ಕೆಲವೊಮ್ಮೆ ಈ ಉಗುರುಗಳು ತಮ್ಮ ಬೆಳವಣಿಗೆ ನಿಲ್ಲಿಸುತ್ತವೆ ಇಲ್ಲವೇ ಅಲ್ಲಿಗೇ ಮುರಿದು ಬೀಳುತ್ತವೆ. ಸೀಳಿಕೊಂಡು ಅರ್ಧಕ್ಕೆ ತುಂಡಾಗುತ್ತವೆ. ಇದಕ್ಕೆ ಮುಖ್ಯ ಕಾರಣ ದೇಹದಲ್ಲಿ ಕೆಲವು ಪೌಷ್ಠಿಕಾಂಶಗಳ ಕೊರತೆ.
ನಿಮ್ಮ ಉಗುರು ಒಣಗಿಕೊಂಡಿದ್ದರೆ ಅದಕ್ಕೆ ಒತ್ತಡ ಬಿದ್ದಾಗ ಅದು ಮುರಿಯುತ್ತದೆ. ಹಾಗೇ ಡಿಟರ್ಜೆಂಟ್ ಪೌಡರ್ ಗಳ ಅತಿಯಾದ ಬಳಕೆ, ನೈಲ್ ಪಾಲಿಶ್ ರಿಮೂವರ್ ನಿಂದ ಸ್ವಚ್ಛ ಮಾಡುವಾಗ ಉಗುರು ಮುರಿದು ಹೋಗುವುದುಂಟು.
ವಯಸ್ಸಾಗುತ್ತಿದ್ದಂತೆ ಉಗುರುಗಳು ತುಂಡಾಗುವುದು ಸಹಜ. ಹಾಗೆಯೇ ಕಾಲಿನ ಬೆರಳಿನ ಉಗುರುಗಳು ದಪ್ಪಗಾಗುತ್ತವೆ. ಇದು ಸಹಜ ಪ್ರಕ್ರಿಯೆ. ಇದರ ಹೊರತಾಗಿ ಉಗುರು ತುಂಡಾಗುತ್ತಿದ್ದರೆ ನಿಮ್ಮಲ್ಲಿ ಕಬ್ಬಿಣದ ಅಂಶದ ಕೊರತೆ ಆಗುತ್ತಿದೆ ಎಂದರ್ಥ. ಇದನ್ನು ಅನೀಮಿಯಾ ಎನ್ನುತ್ತೇವೆ. ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾದಾಗ ಮೊದಲು ಕಾಣಿಸಿಕೊಳ್ಳುವುದೇ ಉಗುರುಗಳಲ್ಲಿ.
ದೇಹದಲ್ಲಿ ಥೈರಾಯ್ಡ್ ಮಟ್ಟ ಕಡಿಮೆಯಾದಾಗಲೂ ದೇಹಕ ತೂಕ ಹೆಚ್ಚಿ ಉಗುರುಗಳ ಆರೋಗ್ಯವೂ ಕೈಕೊಡುತ್ತದೆ. ಉಗುರಿನ ರಕ್ತನಾಳಗಳಲ್ಲಿ ಸರಿಯಾಗಿ ರಕ್ತ ಸಂಚಾರ ಆಗದಿದ್ದರೂ ಉಗುರು ಹಾಳಾಗುತ್ತದೆ.
ಸಾಧ್ಯವಾದಷ್ಟು ಕೈಬೆರಳು ಹಾಗೂ ಉಗುರುಗಳನ್ನು ಮಾಯಿಸ್ಚರೈಸರ್ ಮಾಡಿ. ಮಲಗುವ ವೇಳೆ ಕೈ ಕಾಲುಗಳಿಗೆ ಎಣ್ಣೆ ಅಥವಾ ಕ್ರೀಮ್ ಹಚ್ಚಿ. ಈ ಸಮಸ್ಯೆ ವಿಪರೀತ ಕಾಡಿದರೆ ವೈದ್ಯರನ್ನೇ ಸಂಪರ್ಕಿಸಿ.