ತನ್ನ ಪತಿ ಮತ್ತೊಬ್ಬಳೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದ ಮುನಿಸಿಕೊಂಡು ತವರಿಗೆ ತೆರಳಿದ್ದ ಪತ್ನಿಯನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡ ಪತಿ ಬಳಿಕ ತಾನು ನಾಪತ್ತೆಯಾಗಿದ್ದಾನೆ.
ಇಂಥದ್ದೊಂದು ವಿಲಕ್ಷಣ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತನ್ನ ಪತಿ ಯಾವಾಗಲೂ ಮೊಬೈಲ್ನಲ್ಲಿ ಹುಡುಗಿಯರೊಂದಿಗೆ ಮಾತನಾಡುತ್ತಾನೆ ಎಂಬ ಕಾರಣಕ್ಕೆ ಆತನ ಪತ್ನಿ ಸಿಟ್ಟಾಗಿದ್ದಾಳೆ.
ಹೀಗಾಗಿ ಗಂಡನ ಮನೆ ತೊರೆದು ತನ್ನ ತವರು ಹಾವೇರಿ ತಾಲೂಕಿನ ಗ್ರಾಮಕ್ಕೆ ಹೋಗಿದ್ದಳು. ಆಗ ಗಂಡ ಅವಳನ್ನು ಪುಸಲಾಯಿಸಿ ನಾನು ಇನ್ನು ಮುಂದೆ ಆ ರೀತಿ ಮಾಡುವುದಿಲ್ಲ ಎಂದು ಮನವೊಲಿಸಿ ಮನೆಗೆ ಕರೆದುಕೊಂಡು ಬಂದಿದ್ದಾನೆ. ಆದರೆ ಅಚ್ಚರಿಯ ಸಂಗತಿಯೆಂದರೆ ಮರುದಿನ ಆತನೇ ಮನೆಯಿಂದ ನಾಪತ್ತೆಯಾಗಿದ್ದಾನೆ. ಇದೀಗ ಪತಿಗಾಗಿ ಪತ್ನಿ ಹುಡುಕಾಟ ನಡೆಸಿದ್ದಾಳೆ.