ದಾಲ್ಚಿನಿ ಅಡುಗೆ ಮನೆಗೆ ಹಾಗೂ ಔಷಧ ಲೋಕಕ್ಕೆ ಹಳೆಯ ಸಾಮಾಗ್ರಿಯೇ. ಅದರೆ ಇದನ್ನು ಬಹುವಿಧದಲ್ಲಿ ಬಳಸಿ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ನಿಮಗೆ ಗೊತ್ತೇ…?
ಆಯುರ್ವೇದದ ಪ್ರಕಾರ ವಾತ ಹಾಗೂ ಕಫ ದೋಷಕ್ಕೆ ದಾಲ್ಚಿನಿ ಅತ್ಯುತ್ತಮ ಮದ್ದಾಗಬಲ್ಲದು. ನಾಲ್ಕು ತುಂಡು ಚೆಕ್ಕೆಯನ್ನು ನಾಲ್ಕು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅದನ್ನು ಎರಡು ಲೋಟಕ್ಕೆ ಇಳಿಸಿ.
ಇದರ ಹಬೆಗೆ ಮುಖವೊಡ್ಡಿ. ಬಳಿಕ ಉಳಿದ ನೀರಿಗೆ ಬೆಲ್ಲ ಬೆರೆಸಿ ಕುಡಿಯಿರಿ. ಇದರಿಂದ ಶೀತದ ಕಿರಿಕಿರಿ ಹಾಗೂ ಮೂಗು ಕಟ್ಟುವಿಕೆ ಕಡಿಮೆಯಾಗುತ್ತದೆ.
ಕಫ ತುಂಬಿ ಉಸಿರುಗಟ್ಟಿದ್ದರೆ, ಚಹಾ ತಯಾರಿಸಿ ಅದಕ್ಕೆ ಎರಡು ಚಮಚ ದಾಲ್ಚಿನಿ ಪುಡಿ ಸೇರಿಸಿ ಬಿಸಿ ಇರುವಾಗಲೇ ಕುಡಿಯಿರಿ. ಇದರಿಂದ ಮೈ ಭಾರವೂ ಕಡಿಮೆಯಾಗುತ್ತದೆ. ಮುಟ್ಟಿನ ಸಮಸ್ಯೆ ಇದ್ದರೆ ದಾಲ್ಚಿನಿ ಹಾಕಿ ಕುದಿಸಿದ ನೀರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ.
ದಿನಕ್ಕೆರಡು ಬಾರಿ ಹೀಗೆ ಮಾಡಿದರೆ ಮುಟ್ಟಿನ ಹೊಟ್ಟೆನೋವು, ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ. ನಿತ್ಯ ಆಹಾರದಲ್ಲಿ ಇದನ್ನು ಬಳಸುವುದರಿಂದ ಕೊಲೆಸ್ಟ್ರಾಲ್ ಕರಗುತ್ತದೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಹಾಗಾಗಿ ನಿತ್ಯ ಕುಡಿಯುವ ಚಹಾ ಕಾಫಿ ಅಥವಾ ಕಷಾಯಕ್ಕೆ ಇದರ ಪುಡಿಯನ್ನು ಬೆರೆಸಿ ಕುಡಿಯಿರಿ.