ಮುಟ್ಟು ಮಹಿಳೆಯರ ಜೀವನದಲ್ಲಿ ಪ್ರತಿ ತಿಂಗಳು ಸಂಭವಿಸುವ ನೈಸರ್ಗಿಕ ಪ್ರಕ್ರಿಯೆ. ಋತುಸ್ರಾವದ ಸಮಯದಲ್ಲಿ ಮಹಿಳೆಯರಿಗೆ ಮೂಡ್ ಸ್ವಿಂಗ್, ತಲೆನೋವು, ಹೊಟ್ಟೆ ನೋವು, ರಕ್ತಸ್ರಾವ, ನಿದ್ರಾಹೀನತೆ ಮುಂತಾದ ಸಮಸ್ಯೆಗಳು ಕಾಡುತ್ತವೆ. ಕೆಲವರಂತೂ ಮುಟ್ಟಿನ ಸಮಯದಲ್ಲಿ ವಿಪರೀತ ತೊಂದರೆಗಳನ್ನು ಅನುಭವಿಸುತ್ತಾರೆ.
ಕೆಲವೊಮ್ಮೆ ಮಾಹಿತಿಯ ಕೊರತೆಯಿಂದಾಗಿ ಮಹಿಳೆಯರು ಕೂಡ ಮುಟ್ಟಿನ ಸಂದರ್ಭದಲ್ಲಿ ತಪ್ಪುಗಳನ್ನು ಮಾಡುತ್ತಾರೆ. ಅದು ಭವಿಷ್ಯದಲ್ಲಿ ಅವರ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ಹಾಗಾಗಿ ಪಿರಿಯಡ್ಸ್ ಸಮಯದಲ್ಲಿ ನಿರ್ದಿಷ್ಟ ಸಂಗತಿಗಳನ್ನು ತಿಳಿದುಕೊಂಡಿರಬೇಕು.
ಪಿರಿಯಡ್ಸ್ ಸಮಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ…
ಹೆಚ್ಚಿನ ಮಹಿಳೆಯರು ಮುಟ್ಟಿನ ಸಮಯದಲ್ಲಿ ಅಸಹನೀಯ ನೋವನ್ನು ಅನುಭವಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಅನೇಕ ಬಾರಿ ಪೇಯ್ನ್ ಕಿಲ್ಲರ್‌ಗಳನ್ನು, ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ. ಇದು ಆರೋಗ್ಯಕ್ಕೆ ಸಮಸ್ಯೆ ಉಂಟುಮಾಡಬಹುದು. ಏಕೆಂದರೆ ಪಿರಿಯಡ್ಸ್ ನೋವನ್ನು ತಡೆಯಲು ತೆಗೆದುಕೊಳ್ಳುವ ಔಷಧಿಗಳು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಈ ಸಮಯದಲ್ಲಿ ಸೇವಿಸುವ ಔಷಧಿಗಳು ತುಂಬಾ ಅಪಾಯಕಾರಿಯಾಗಿದ್ದು, ಇವುಗಳಿಂದ ಮಹಿಳೆಗೆ ಹೃದಯಾಘಾತ, ಕರುಳಿನ ಸಮಸ್ಯೆಗಳು ಸಹ ಉಂಟಾಗಬಹುದು. ಅದಕ್ಕಾಗಿಯೇ ಮಹಿಳೆಯರು ಮುಟ್ಟಿನ ಸಮಯದಲ್ಲಿ ಔಷಧವನ್ನು ತೆಗೆದುಕೊಳ್ಳಬಾರದು.
ಮುಟ್ಟಿನ ಸಮಯದಲ್ಲಿ ನೋವು ತಾಳಲಾಗದೆ ಅನೇಕ ಮಹಿಳೆಯರು ಕಾಫಿ ಕುಡಿಯುತ್ತಾರೆ. ಆದರೆ ಮುಟ್ಟಾದಾಗ ಹೆಚ್ಹೆಚ್ಚು ಕಾಫಿ ಕುಡಿದರೆ ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ. ಏಕೆಂದರೆ ಕಾಫಿಯಲ್ಲಿರುವ ಕೆಫೀನ್ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ಅದಕ್ಕಾಗಿಯೇ ಪಿರಿಯಡ್ಸ್ ಸಮಯದಲ್ಲಿ ಹೆಚ್ಚು ಕಾಫಿ ಕುಡಿಯಬೇಡಿ.
ಋತುಸ್ರಾವದ ವೇಳೆ ಅನೇಕ ಮಹಿಳೆಯರು ಪ್ಯಾಡ್ ಅಥವಾ ಸ್ಯಾನಿಟರಿ ನ್ಯಾಪ್ಕಿನ್ ಅನ್ನು ಕಾಲಕಾಲಕ್ಕೆ ಬದಲಾಯಿಸುವುದೇ ಇಲ್ಲ. ಬೆಳಿಗ್ಗೆ ಧರಿಸಿದ ಪ್ಯಾಡನ್ನು ರಾತ್ರಿಗೆ ಚೇಂಜ್ ಮಾಡ್ತಾರೆ. ಈ ರೀತಿ ಮಾಡುವುದರಿಂದ ಗುಪ್ತಾಂಗಗಳಲ್ಲಿ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ. ಸೋಂಕಿಗೆ ನೀವು ತುತ್ತಾಗಬಹುದು. ಹಾಗಾಗಿ ಪ್ರತಿ 6 ಗಂಟೆಗಳಿಗೊಮ್ಮೆ ಪ್ಯಾಡ್ ಬದಲಾಯಿಸಬೇಕು.