ಮುಟ್ಟಿನ ಸಮಯದಲ್ಲಿ ಮಹಿಳೆಯರು ಕೆಲವೊಂದು ನಿರ್ದಿಷ್ಟ ಕೆಲಸಗಳನ್ನು ಮಾಡಬಾರದು ಎಂಬ ನಿಯಮ ಅನಾದಿ ಕಾಲದಿಂದಲೂ ಇದೆ. ಇದು ಸತ್ಯವೋ ಮಿಥ್ಯವೋ ಎಂಬುದನ್ನು ಪರಿಶೀಲಿಸದೇ ಜನರು ಪಾಲಿಸುತ್ತಾರೆ. ಮುಟ್ಟಾದಾಗ ಮಹಿಳೆಯರು ತಮ್ಮ ಕೂದಲನ್ನು ತೊಳೆದರೆ ಅಥವಾ ಮುಟ್ಟಿನ ಸಮಯದಲ್ಲಿ ವ್ಯಾಯಾಮ ಮಾಡಿದರೆ ಅವರ ಆರೋಗ್ಯವು ಹದಗೆಡುತ್ತದೆ ಎಂದು ಹೇಳಲಾಗುತ್ತದೆ.
ಋತುಮತಿಯಾದಾಗ ಅಡುಗೆಮನೆಗೆ ಹೋಗಬಾರದು, ಉಪ್ಪಿನಕಾಯಿಯನ್ನು ಮುಟ್ಟಬಾರದು, ಮುಟ್ಟಿದರೆ ಉಪ್ಪಿನಕಾಯಿ ಹಾಳಾಗಿ ಹೋಗುತ್ತದೆ. ಅಡುಗೆಮನೆ ಅಶುದ್ಧವಾಗುತ್ತದೆ ಎಂದೆಲ್ಲಾ ಹಿರಿಯರು ಹೇಳುವುದನ್ನು ನೀವೂ ಕೇಳಿರಬಹುದು. ಈ ಆಚರಣೆಗಳ ಹಿಂದಿನ ಅಸಲಿ ಸತ್ಯವೇನು ಅನ್ನೋದನ್ನು ತಿಳಿಯೋಣ.
ಪಿರಿಯಡ್ಸ್‌ನಲ್ಲಿ ಉಪ್ಪಿನಕಾಯಿಯನ್ನು ಮುಟ್ಟಬೇಕೇ ಅಥವಾ ಬೇಡವೇ?
ಪುರಾತನ ಕಾಲದಿಂದಲೂ, ಮುಟ್ಟಾದಾಗ ಉಪ್ಪಿನಕಾಯಿಯನ್ನು ಮುಟ್ಟಿದರೆ ಉಪ್ಪಿನಕಾಯಿ ಕೆಡುತ್ತದೆ ಅಥವಾ ಕೊಳೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಆದರೆ ಈ ವಿಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಮುಟ್ಟು ಮತ್ತು ಉಪ್ಪಿನಕಾಯಿಗೆ ಒಂದಕ್ಕೊಂದು ಸಂಬಂಧವಿಲ್ಲ. ಉಪ್ಪಿನಕಾಯಿ ಒಂದು ಖಾದ್ಯ ವಸ್ತುವಾಗಿದ್ದು ಅದನ್ನು ಸರಿಯಾಗಿ ಇಡದಿದ್ದರೆ ಕೆಡಬಹುದು. ಮುಟ್ಟಿನ ಸಮಯದಲ್ಲಿ ಸ್ಪರ್ಷಿಸಿದರೆ ಕೆಟ್ಟು ಹೋಗುತ್ತದೆ ಎಂಬದು ಸಂಪೂರ್ಣವಾಗಿ ಅಸಂಬದ್ಧ ಮತ್ತು ವದಂತಿಯಾಗಿದೆ.
ಮುಟ್ಟಿನ ಸಮಯದಲ್ಲಿ ಕೂದಲನ್ನು ತೊಳೆಯದಂತೆ ಸಲಹೆ ನೀಡಲಾಗುತ್ತದೆ. ಏಕೆಂದರೆ ಆಗ ರಕ್ತದ ಹರಿವು ಅಧಿಕವಾಗಿರುತ್ತದೆ. ಆದರೆ ಇದು ಕೂಡ ಸತ್ಯಕ್ಕೆ ದೂರವಾದದ್ದು. ವಾಸ್ತವವಾಗಿ ಋತುಚಕ್ರದಲ್ಲಿ ಕೂದಲು ತೊಳೆಯುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಅದು ನಿಮ್ಮ ಪಿರಿಯಡ್ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ. ಪಿರಿಯಡ್ಸ್ ಸಮಯದಲ್ಲಿ ವ್ಯಾಯಾಮ ಮಾಡಬಾರದು ಎಂಬುದನ್ನು ನೀವೂ ಕೇಳಿರಬಹುದು. ಮುಟ್ಟಾದಾಗ ವ್ಯಾಯಾಮ ಮಾಡಿದರೆ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗುತ್ತದೆ.
ಆದರೆ ಋತುಚಕ್ರದ ಸಮಯದಲ್ಲಿ ಕೆಲವರಿಗೆ ವಿಪರೀತ ಸೆಳೆತ, ಬ್ಲೀಡಿಂಗ್ ಸಮಸ್ಯೆಯಿರುತ್ತದೆ. ಲಘು ವ್ಯಾಯಾಮ ಮಾಡಿದರೆ ಸೆಳೆತ ಕಡಿಮೆಯಾಗುತ್ತದೆ. ಪಿರಿಯಡ್ಸ್ ಸಮಯದಲ್ಲಿ ಅಡುಗೆಮನೆಗೆ ಕಾಲಿಡಬಾರದು ಎಂಬ ನಿಯಮ ಅನೇಕ ಕಡೆಗಳಲ್ಲಿ ರೂಢಿಯಲ್ಲಿದೆ. ಆದರೆ ಅಡುಗೆ ಮನೆಗೂ ಋತುಚಕ್ರಕ್ಕೂ ಯಾವುದೇ ಸಂಬಂಧವಿಲ್ಲ. ಮುಟ್ಟಿನ ಸಮಯದಲ್ಲಿ ನೀವು ಹೈಜಿನಿಕ್ ಆಗಿರಬೇಕು. ಚೆನ್ನಾಗಿ ಸ್ನಾನ ಮಾಡಿ ಸ್ವಚ್ಛವಾಗಿದ್ದರೆ ಅಡುಗೆಮನೆಗೆ ಹೋಗಬಹುದು. ಇದರಿಂದ ಅಡುಗೆಮನೆಯಲ್ಲಿ ಯಾವುದೇ ಕೆಟ್ಟ ಪರಿಣಾಮವಾಗುವುದಿಲ್ಲ.