ಎರಡು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿ.ಎಸ್. ಯಡಿಯೂರಪ್ಪನವರು ಸೋಮವಾರದಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡುವ ಮುನ್ನ ಮಾಡಿದ ಭಾಷಣದ ವೇಳೆ ಯಡಿಯೂರಪ್ಪನವರು ತಾವು ಸಾಗಿಬಂದ ಹೋರಾಟದ ಹಾದಿಯನ್ನು ಬಿಚ್ಚಿಟ್ಟಿದ್ದಾರೆ.
ಭಾಷಣದುದ್ದಕ್ಕೂ ಭಾವುಕರಾಗಿದ್ದ ಯಡಿಯೂರಪ್ಪ ಒಂದು ಹಂತದಲ್ಲಿ ಗದ್ಗದಿತರಾದರು. ಅದರಲ್ಲೂ ಏಳು ಬಾರಿ ತಮ್ಮನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ ಶಿಕಾರಿಪುರದ ಜನತೆಯನ್ನು ವಿಶೇಷವಾಗಿ ಸ್ಮರಿಸಿಕೊಂಡ ಯಡಿಯೂರಪ್ಪ ಈ ವೇಳೆ ಭಾವುಕರಾಗಿದ್ದಾರೆ. ಜೊತೆಗೆ ತಾವು ರಾಜ್ಯ ರಾಜಕಾರಣದಲ್ಲಿಯೇ ಮುಂದಿನ ದಿನಗಳಲ್ಲಿ ಮುಂದುವರಿಯುವುದಾಗಿ ಹೇಳುವ ಮೂಲಕ ಕುತೂಹಲಕ್ಕೆ ಕಾರಣರಾಗಿದ್ದಾರೆ.
ಭಾಷಣ ಮುಗಿದ ಬಳಿಕ ಔತಣಕೂಟದಲ್ಲಿ ಭಾಗಿಯಾಗಿದ್ದ ಯಡಿಯೂರಪ್ಪ ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಯಡಿಯೂರಪ್ಪನವರ ರಾಜೀನಾಮೆಯನ್ನು ಅಂಗೀಕರಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಸೂಚಿಸಿದ್ದಾರೆ.
ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ‘ಮಾಜಿ’ಯಾದ ಸಚಿವರು
ರಾಜೀನಾಮೆ ಸಲ್ಲಿಸಿದ ನಂತರ ನೇರವಾಗಿ ತಮ್ಮ ಅಧಿಕೃತ ನಿವಾಸ ಕಾವೇರಿಗೆ ತೆರಳಿದ ಯಡಿಯೂರಪ್ಪನವರು ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದಿದ್ದಾರೆ. ಮನೆಗೆ ಹೋಗುತ್ತಿದ್ದಂತೆ ಮೊಗಸಾಲೆಯಲ್ಲಿ ಕುಳಿತ ಯಡಿಯೂರಪ್ಪ ಆಗಮಿಸಿದ್ದ ಶಾಸಕರು, ಬೆಂಬಲಿಗರ ಜೊತೆ ಲೋಕಾಭಿರಾಮವಾಗಿ ಮಾತನಾಡಿದ್ದಾರೆ.
ಮಾತುಕತೆ ಸಂದರ್ಭದಲ್ಲಿ ಯಾವುದೇ ನೋವನ್ನು ತೋರ್ಪಡಿಸಿಕೊಳ್ಳದೆ ನಗುನಗುತ್ತಲೇ ಇದ್ದ ಯಡಿಯೂರಪ್ಪನವರು ಶಾಸಕರು, ಬೆಂಬಲಿಗರನ್ನು ಕಳುಹಿಸಿಕೊಟ್ಟ ಬಳಿಕ ರಾತ್ರಿವರೆಗೆ ಮನೆಯಲ್ಲಿಯೇ ಇದ್ದರು. ಯಡಿಯೂರಪ್ಪನವರು ನಂತರ ಕುಟುಂಬ ಸದಸ್ಯರೊಂದಿಗೆ ಹೋಟೆಲ್ ಗೆ ತೆರಳಿ ಊಟ ಮುಗಿಸಿದ ಬಳಿಕ ಮನೆಗೆ ಮರಳಿದ್ದಾರೆ.