ಭಾರತದ ಅತ್ಯಂತ ಸಿರಿವಂತ ವ್ಯಕ್ತಿ ಎನಿಸಿಕೊಂಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಉದ್ಯಮಿ ಗೌತಮ್ ಅದಾನಿ ಹಿಂದಿಕ್ಕಿದ್ದಾರೆ. IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರಲ್ಲಿ ಗೌತಮ್ ಅದಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಅದಾನಿ ಅವರ ಒಟ್ಟಾರೆ ಸಂಪತ್ತು 10,94,400 ಕೋಟಿ ರೂಪಾಯಿ. ಪ್ರತಿ ದಿನದ ಆದಾಯವೇ 1,612 ಕೋಟಿ ರೂಪಾಯಿ. ಅದಾನಿ ಅವರ ನಿವ್ವಳ ಮೌಲ್ಯ ಈಗ ಮುಖೇಶ್ ಅಂಬಾನಿ ಅವರಿಗಿಂತ 3 ಲಕ್ಷ ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ.
ಸರಕು ವ್ಯಾಪಾರ ಕಂಪನಿಯನ್ನು ಕಲ್ಲಿದ್ದಲು, ಇಂಧನ ವಹಿವಾಟಿಗೆ ಸಂಘಟಿತವಾಗಿ ವಿಸ್ತರಿಸುವ ಮೂಲಕ ಗೌತಮ್ ಅದಾನಿ 1 ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳದೊಂದಿಗೆ ಏಳು ಕಂಪನಿಗಳನ್ನು ನಿರ್ಮಿಸಿದ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ. ಹತ್ತು ವರ್ಷಗಳ ಕಾಲ ಅತ್ಯಂತ ಶ್ರೀಮಂತ ಭಾರತೀಯ ಎಂಬ ಪಟ್ಟವನ್ನು ಮುಖೇಶ್ ಅಂಬಾನಿ ಅವರೇ ಅಲಂಕರಿಸಿದ್ದರು. ಇದೀಗ 7.94 ಲಕ್ಷ ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ಮೊದಲ ಸ್ಥಾನದಿಂದ ಕೆಳಗಿಳಿಸಲ್ಪಟ್ಟಿದ್ದರೂ ಸಹ ಅಂಬಾನಿ ಅವರ ಸಂಪತ್ತು ಕಳೆದ ವರ್ಷ ಶೇ.11 ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಪ್ರತಿದಿನ ತಮ್ಮ ಸಂಪತ್ತಿಗೆ 210 ಕೋಟಿ ರೂಪಾಯಿಯನ್ನು ಅವರು ಜೋಡಿಸಿದ್ದಾರೆ. ಒಟ್ಟಾರೆಯಾಗಿ ಅದಾನಿ ಮತ್ತು ಅಂಬಾನಿ ಭಾರತದ ಅಗ್ರ ಹತ್ತು ಶ್ರೀಮಂತರ ಒಟ್ಟು ಸಂಪತ್ತಿನ ಶೇ.59 ರಷ್ಟನ್ನು ಹೊಂದಿದ್ದಾರೆ.2012 ರಲ್ಲಿ ಅದಾನಿ ಅವರ ಸಂಪತ್ತು ಅಂಬಾನಿ ಅವರ ಆಸ್ತಿಯಲ್ಲಿ ಕೇವಲ ಆರನೇ ಒಂದು ಭಾಗದಷ್ಟಿತ್ತು. ಹತ್ತು ವರ್ಷಗಳ ನಂತರ ಅಂಬಾನಿ ಅವರನ್ನೇ ಹಿಂದಿಕ್ಕಿದ ಅದಾನಿ ಶ್ರೀಮಂತಿಕೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.
ಕಳೆದ ವರ್ಷ ಅಂಬಾನಿ ಅವರ ಆಸ್ತಿ ಅದಾನಿಗಿಂತ 1 ಲಕ್ಷ ಕೋಟಿ ರೂಪಾಯಿಯಷ್ಟು ಹೆಚ್ಚಾಗಿತ್ತು. ಆದ್ರೀಗ ಅಂಬಾನಿ ಆಸ್ತಿ ಗಳಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ. ಮೂರನೇ ಸ್ಥಾನದಲ್ಲಿರುವ ಸೈರಸ್ ಪೂನಾವಾಲಾ ವಿಶ್ವದ ವ್ಯಾಕ್ಸಿನ್ ಕಿಂಗ್ ಎನಿಸಿಕೊಂಡಿದ್ದಾರೆ. 41,700 ಕೋಟಿ ಮೊತ್ತದ ಸಂಪತ್ತು ಅವರ ಬಳಿಯಿದೆ. ಫಾರ್ಮಾ ಉದ್ಯಮಿ ದಿಲೀಪ್ ಶಾಂಘ್ವಿ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಉದಯ್ ಕೋಟಕ್ ಟಾಪ್ 10 ಪಟ್ಟಿಯಲ್ಲಿದ್ದಾರೆ.
ಜಯ್ ಚೌಧರಿ ಮತ್ತು ಕುಮಾರ್ ಮಂಗಲಂ ಬಿರ್ಲಾ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಶಿವ ನಾಡರ್ & ಫ್ಯಾಮಿಲಿ 1.85 ಲಕ್ಷ ಕೋಟಿ ಸಂಪತ್ತಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ನಂತರ ರಾಧಾಕಿಶನ್ ದಮಾನಿ , ವಿನೋದ್ ಶಾಲ್ತಿಲಾಲ್ ಅದಾನಿ, SP ಹಿಂದುಜಾ & ಫ್ಯಾಮಿಲಿ, LN ಮಿತ್ತಲ್ & ಫ್ಯಾಮಿಲಿ ಕೂಡ ಶ್ರೀಮಂತರ ಪಟ್ಟಿಯಲ್ಲಿವೆ. ಗೌತಮ್ ಅದಾನಿ 2018 ರಲ್ಲಿ 8 ನೇ ಶ್ರೇಯಾಂಕ ಪಡೆದಿದ್ದರು. ಅವರ ಸಂಪತ್ತು 15.4 ಪಟ್ಟು ಹೆಚ್ಚಾಗಿದೆ.
ಸಹೋದರ ವಿನೋದ್ 49 ನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಏರಿದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ ಅತ್ಯಂತ ಕಿರಿಯ ಎನಿಸಿಕೊಂಡಿರುವ ಜೆಪ್ಟೊ ಸಂಸ್ಥಾಪಕಿ ಕೈವಲ್ಯ ವೋಹ್ರಾಗೆ ಕೇವಲ 19 ವರ್ಷ. ಭಾರತವು ಈ ವರ್ಷ 221 ಬಿಲಿಯನೇರ್‌ಗಳನ್ನು ಹೊಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಶೇ.16 ರಷ್ಟು ಕಡಿಮೆಯಾಗಿದೆ. ಶ್ರೀಮಂತರ ಪಟ್ಟಿಯಲ್ಲಿ 94 ಅನಿವಾಸಿ ಭಾರತೀಯರಿದ್ದಾರೆ.