ಸೌಂದರ್ಯವರ್ಧನೆಗೆ ಸಾಕಷ್ಟು ಮನೆಮದ್ದುಗಳ ಬಗ್ಗೆ ಕೇಳಿರ್ತೀರಾ. ಪರಿಸರ ಮಾಲಿನ್ಯ, ವಾಹನಗಳ ಹೊಗೆ, ಧೂಳಿನಿಂದ ಬಾಡಿ ಹೋಗಿರುವ ಮುಖದ ಚೆಲುವನ್ನು ಹೆಚ್ಚಿಸಲು ಮೊಟ್ಟೆ ಕೂಡ ಅತ್ಯಂತ ಪರಿಣಾಮಕಾರಿ ಪದಾರ್ಥಗಳಲ್ಲೊಂದು.
ಮುಖದ ಮೇಲಿನ ಮೊಡವೆ, ಕಲೆಗಳನ್ನೆಲ್ಲ ನಿವಾರಿಸಿ ನಿರ್ಮಲಗೊಳಿಸಲು ಮೊಟ್ಟೆ ಸಹಾಯ ಮಾಡುತ್ತದೆ. ಮೊಟ್ಟೆ ನಿಮ್ಮ ಮುಖದ ಹೊಳಪನ್ನು ಕೂಡ ಹೆಚ್ಚಿಸುತ್ತದೆ. ಮೊಟ್ಟೆಯನ್ನು ಮುಖದ ಸೌಂದರ್ಯ ಹೆಚ್ಚಿಸಲು ಯಾವೆಲ್ಲ ರೀತಿಯಲ್ಲಿ ಬಳಸಬಹುದು ಅನ್ನೋದನ್ನು ನೋಡೋಣ.
ಮೊಟ್ಟೆಯ ಫೇಸ್ ಪ್ಯಾಕ್…
ಒಂದು ಬೌಲ್ ತೆಗೆದುಕೊಂಡು ಮೊಟ್ಟೆಯನ್ನು ಒಡೆದು ಅದರಲ್ಲಿ ಹಾಕಿ. ಚಮಚದ ಸಹಾಯದಿಂದ ಚೆನ್ನಾಗಿ ಕಲಕಿ ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ಹೊತ್ತು ಅದನ್ನು ಹಾಗೇ ಬಿಡಿ. ನಂತರ ಮುಖಕ್ಕೆ ಹಚ್ಚಿಕೊಳ್ಳಿ. ಫೇಸ್ ಪ್ಯಾಕ್ ಒಣಗಿದ ನಂತರ ಮುಖವನ್ನು ಸ್ವಚ್ಛವಾದ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಮುಖವು ಹೆಚ್ಚು ಕಾಂತಿಯುಕ್ತವಾಗುತ್ತದೆ.
ನಿಯಮಿತವಾಗಿ ಈ ಫೇಸ್ ಪ್ಯಾಕ್ ಹಾಕುತ್ತಾ ಬಂದರೆ ಮುಖದ ಮೇಲಿನ ಕಲೆಗಳೆಲ್ಲ ಮಾಯವಾಗುತ್ತವೆ. ಮೊಟ್ಟೆಯನ್ನು ಮುಖಕ್ಕೆ ಹಚ್ಚಿಕೊಂಡ ಬಳಿಕ ಒಂದು ರೀತಿಯ ವಾಸನೆ ಬರುವುದು ಸಹಜ. ಒಂದು ವೇಳೆ ಆ ವಾಸನೆ ಇಷ್ಟವಾಗದೇ ಇದ್ದಲ್ಲಿ, ಮೊದಲೇ ಮೊಟ್ಟೆಯ ಹಳದಿ ಹಾಗೂ ಬಿಳಿ ಭಾಗವನ್ನು ಬೇರ್ಪಡಿಸಿಕೊಳ್ಳಿ. ಬಿಳಿಭಾಗವನ್ನು ಮಾತ್ರ ಬೌಲ್‌ಗೆ ಹಾಕಿ, ಚೆನ್ನಾಗಿ ಬೀಟ್ ಮಾಡಿಕೊಂಡು ಮುಖಕ್ಕೆ ಲೇಪಿಸಿ.