ಬ್ಯೂಟಿ ಪಾರ್ಲರ್‌ಗಳಲ್ಲಿ ಬಿಸಿ ನೀರಿನ ಹಬೆ ಕೊಡೋದನ್ನು ನೋಡಿರ್ತೀರಾ. ಕೆಲವರು ಮನೆಯಲ್ಲಿ ಕೂಡ ತಲೆ ಮೇಲೆ ಟವೆಲ್ ಹಾಕಿಕೊಂಡು ಸ್ಟೀಮ್ ತೆಗೆದುಕೊಳ್ತಾರೆ. ಕೊರೊನಾ ಸಮಯದಲ್ಲಂತೂ ವೈರಸ್‌ನಿಂದ ಪಾರಾಗಲು ಈ ರೀತಿ ಹಬೆ ತೆಗೆದುಕೊಳ್ಳುವುದು ಅತ್ಯುತ್ತಮ ಮಾರ್ಗವೆಂದು ಹೇಳಲಾಗುತ್ತಿತ್ತು.
ಈ ರೀತಿ ಬಿಸಿನೀರಿನ ಹಬೆ ತೆಗೆದುಕೊಳ್ಳುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಕೆಲವರು ಬಿಸಿನೀರಿಗೆ ಬೇವು, ಉಪ್ಪು, ನಿಂಬೆರಸವನ್ನು ಬೆರೆಸಿ ಸ್ಟೀಮ್ ಪಡೆಯುತ್ತಾರೆ. ಇದರಲ್ಲಿ ಅನೇಕ ರೀತಿಯ ಚರ್ಮ ಸಂಬಂಧಿ ಸಮಸ್ಯೆಗೆ ಪರಿಹಾರವಿದೆ.
ಪ್ರತಿನಿತ್ಯ ನಾವು ಧೂಳು, ಮಾಲಿನ್ಯಯುಕ್ತ ಪರಿಸರದಲ್ಲಿ ಓಡಾಡುವುದರಿಂದ ಮುಖದ ಪೋರ್ಸ್ ತೆರೆದುಕೊಂಡಿರುತ್ತದೆ. ಹಬೆ ತೆಗೆದುಕೊಳ್ಳುವುದರಿಂದ ಚರ್ಮದ ಮೇಲಿನ ಕೊಳೆಯನ್ನು ಹೋಗಲಾಡಿಸಬಹುದು. ನಿರ್ಜೀವ ತ್ವಚೆಯನ್ನು ಇದು ತೇವಯುಕ್ತವಾಗಿಸುತ್ತದೆ. ಅದರಲ್ಲೂ ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್‌ಹೆಡ್ಸ್ ಸಮಸ್ಯೆ ಇರುವವರಿಗೆ ಸ್ಟೀಮಿಂಗ್ ರಾಮಬಾಣವಿದ್ದಂತೆ.
ಇದು ಮುಖವನ್ನು ಶುದ್ಧಗೊಳಿಸುತ್ತದೆ. ಚರ್ಮದ ಬಗ್ಗೆ ನಾವು ಸಾಕಷ್ಟು ಕಾಳಜಿ ವಹಿಸಿದರೂ ಕೆಲವೊಮ್ಮೆ ಡಲ್ ಆಗಿ ನಿರ್ಜಲೀಕರಣಗೊಂಡಂತೆ ಕಾಣುತ್ತದೆ. ಹಾಗಿದ್ದಾಗ ನೀವು ಬಿಸಿನೀರಿನ ಹಬೆ ತೆಗೆದುಕೊಳ್ಳಬೇಕು. ರಕ್ತ ಪರಿಚಲನೆ ಸುಧಾರಿಸಲು ಸಹ ಸ್ಟೀಮ್ ತುಂಬಾ ಪರಿಣಾಮಕಾರಿಯಾಗಿದೆ. ಕೆಲವೊಮ್ಮೆ ದೇಹದಲ್ಲಿ ನೀರಿನ ಕೊರತೆಯಿಂದಾಗಿ ನಮ್ಮ ಮುಖದ ಚರ್ಮ ಡಿಹೈಡ್ರೇಟ್ ಆಗುತ್ತದೆ. ಆಗ ನೀವು ಫೇಸ್ ಸ್ಟೀಮಿಂಗ್ ಮಾಡಬೇಕು. ಇದರಿಂದ ಮುಖ ಕಾಂತಿಯುಕ್ತವಾಗುತ್ತದೆ. ಚರ್ಮಕ್ಕೆ ಹೊಳಪು ಬರುತ್ತದೆ.
ಹಬೆಯನ್ನು ತೆಗೆದುಕೊಳ್ಳುವುದರಿಂದ ಮುಖದ ಮೇಲೆ ಕಾಲಜನ್ ಮತ್ತು ಎಲಾಸ್ಟಿನ್ ಉತ್ಪಾದನೆಯು ಹೆಚ್ಚಾಗುತ್ತದೆ. ಇದು ನಮ್ಮ ಮುಖವನ್ನು ಯೌವ್ವನಯುಕ್ತವಾಗಿಡುತ್ತದೆ. ಮುಖದ ಹೊಳಪು ಕೂಡ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ವಾರಕ್ಕೆ ಮೂರು ಬಾರಿ ಸ್ಟೀಮ್ ತೆಗೆದುಕೊಳ್ಳುವಂತೆ ತಜ್ಞರು ಶಿಫಾರಸು ಮಾಡುತ್ತಾರೆ.