ಮುಖದ ಸೌಂದರ್ಯ ಎಷ್ಟೇ ಸಹಜವಾಗಿದ್ದರೂ, ಋತುಮಾನಕ್ಕೆ ಅನುಗುಣವಾಗಿ ಅದಕ್ಕೆ ಪೋಷಣೆ ಅತ್ಯಗತ್ಯ. ಹೇಳಿ ಕೇಳಿ ಈಗ ಮಾವಿನ ಹಣ್ಣಿನ ಕಾಲ. ಮಾವಿನ ಹಣ್ಣು ರುಚಿ ಮತ್ತು ಆರೋಗ್ಯಕ್ಕಷ್ಟೇ ಅಲ್ಲದೇ ಸೌಂದರ್ಯವರ್ಧಕವೂ ಹೌದು.
ಮಾವಿನ ಹಣ್ಣಿನ ಫೇಶಿಯಲ್ ಸಿಕ್ಕಾಪಟ್ಟೆ ಫೇಮಸ್ ಕೂಡ. ಮಾವಿನ ಹಣ್ಣಿನಲ್ಲಿರುವ ವಿಟಮಿನ್ ಸಿ ತ್ವಚೆಯ ಅಂದವನ್ನು ಇಮ್ಮಡಿಗೊಳಿಸುತ್ತದೆ. ಹಾಗಾದರೆ ನೈಸರ್ಗಿಕವಾಗಿ ದೊರಕುವ ಮಾವಿನ ಹಣ್ಣನ್ನು ಬಳಸಿ ಫೇಶಿಯಲ್ ಮಾಡಿಕೊಳ್ಳುವುದು ಹೇಗೆ ಅನ್ನೋದು ಇಲ್ಲಿದೆ ನೋಡಿ.
ಮೊದಲಿಗೆ ಒಂದು ಮಾವಿನ ಹಣ್ಣಿನ ಹೋಳುಗಳನ್ನು ಮಿಕ್ಸಿಯಲ್ಲಿ ಹಾಕಿ ಪ್ಯೂರಿ ಮಾಡಿಕೊಳ್ಳಿ.
ಈಗ 2 ಸ್ಪೂನ್ ಮಾವಿನ ಹಣ್ಣಿನ ಪ್ಯೂರಿಗೆ 2 ಚಮಚ ಮೊಸರು ಬೆರೆಸಿ ಕ್ಲೆನ್ಸಿಂಗ್ ಕ್ರೀಂ ರೆಡಿ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಕ್ಲೆನ್ಸ್ ಮಾಡಿಕೊಳ್ಳಬೇಕು. ಕ್ಲೆನ್ಸಿಂಗ್ನಿಂದ ಮುಖದಲ್ಲಿನ ಧೂಳು, ಮೇಕಪ್ ಅಂಶ ಹೊರ ಹೋಗುತ್ತದೆ.
ಕ್ಲೆನ್ಸಿಂಗ್ ಬಳಿಕ ಸ್ಕ್ರಬ್ ಮಾಡಿಕೊಳ್ಳಬೇಕು. ಇದಕ್ಕಾಗಿ ಬ್ರೌನ್ ಶುಗರ್ ಮತ್ತು ಮಾವಿನ ಹಣ್ಣಿನ ಪ್ಯೂರಿ ಬೆರೆಸಿ ಸ್ಕ್ರಬ್ ಪೇಸ್ಟ್ ಸಿದ್ಧ ಮಾಡಿಕೊಳ್ಳಬೇಕು. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 3 ನಿಮಿಷಗಳ ಕಾಲ ಮೇಲ್ಮುಕವಾಗಿ ಮಸಾಜ್ ಮಾಡಬೇಕು.
ಬಳಿಕ ಸ್ಕ್ರಬ್ ಪ್ಯಾಕ್ ಅನ್ನು ತೆಗೆದು ಬಿಸಿ ನೀರಿನ ಹಬೆ ತೆಗೆದುಕೊಳ್ಳಬೇಕು.
ನಂತರ 2 ಚಮಚ ಮಾವಿನ ಹಣ್ಣಿನ ಪ್ಯೂರಿ ಮತ್ತು ಒಂದು ಹನಿ ಜೇನುತುಪ್ಪ ಬೆರೆಸಿ ಪೇಸ್ಟ್ ಸಿದ್ಧ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ನಂತರ 5 ನಿಮಿಷ ಬಿಟ್ಟು ಈ ಮಾವಿನ ಹಣ್ಣಿನ ಪ್ಯಾಕ್ ತೆಗೆದು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಬೇಕು.
ಸುಮಾರು 2 ದಿನಗಳಲ್ಲಿ ತ್ವಚೆಯಲ್ಲಿ ಹೊಳಪು ಕಾಣಿಸುತ್ತದೆ. ಮಾವಿನ ಹಣ್ಣು ಕೆಲವರಿಗೆ ಉಷ್ಣಾಂಶ ಹೆಚ್ಚಿಸುವುದರಿಂದ ಸ್ವಲ್ಪ ಪ್ರಮಾಣದಲ್ಲಿ ಹಣ್ಣನ್ನು ಬಳಸಬಹುದು.
ಮಾವಿನ ಹಣ್ಣಿನ ಫೇಶಿಯಲ್ ಹೇಗೆ ಪರಿಣಾಮಕಾರಿ?
ಬಿಸಿಲಿನಿಂದ ಉಂಟಾದ ಟ್ಯಾನ್ ನಿವಾರಿಸುತ್ತದೆ.
ಮೊಡವೆ ಕಲೆಯನ್ನು ತೆಗೆಯುತ್ತದೆ.
ಚರ್ಮಕ್ಕೆ ಕಾಂತಿ ನೀಡುತ್ತದೆ.
ಕೊಲೆಜಿನ್ ಉತ್ಪತ್ತಿ ಮಾಡುತ್ತದೆ.
ಸ್ಕಿನ್ ಟೋನ್ ವೃದ್ಧಿಸುತ್ತದೆ.
ತ್ವಚೆಯನ್ನು ರಿಜೆನ್ಯೂಯೇಟ್ ಮಾಡುತ್ತದೆ.