ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜಗತ್ತಿನಾದ್ಯಂತ ಸಾಕಷ್ಟು ಸುದ್ದಿ ಮಾಡಿದವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್. ಈ ರೀತಿ ಚರ್ಚೆಗೀಡಾಗ್ತಿರೋದಕ್ಕೆ ಎರಡು ಕಾರಣಗಳಿವೆ, ಒಂದು ಯುದ್ಧದಲ್ಲಿ ಪುಟಿನ್‌ರ ಆಕ್ರಮಣಕಾರಿ ವರ್ತನೆ ಮತ್ತು ಅವರ ಅನಾರೋಗ್ಯ.
ಮೂಲಗಳ ಪ್ರಕಾರ ಪುಟಿನ್ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿಯೇ ಸಾರ್ವಜನಿಕ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಅಧಿಕೃತ ನಿವಾಸದ ಮೆಟ್ಟಿಲುಗಳಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿತ್ತು. ಈ ವೇಳೆ ಅವರ ಸೊಂಟಕ್ಕೆ ಪೆಟ್ಟು ಬಿದ್ದಿದೆಯಂತೆ.
ಒಮ್ಮೆಲೇ ಹಲವಾರು ಕಾಯಿಲೆಗಳು ರಷ್ಯಾ ಅಧ್ಯಕ್ಷರನ್ನು ಕಾಡುತ್ತಿದೆಯಂತೆ. ಕ್ಯಾನ್ಸರ್, ಪಾರ್ಕಿನ್ಸನ್ ಕಾಯಿಲೆ ಮತ್ತು ಸ್ಕಿಜೋಆಫೆಕ್ಟಿವ್ ಡಿಸಾರ್ಡರ್ ಜೊತೆಗೆ ಇನ್ನೂ ಕೆಲವು ಅನಾರೋಗ್ಯಗಳು ಪುಟಿನ್‌ಗೆ ಇವೆಯಂತೆ. ಈಗಾಗ್ಲೇ ಪುಟಿನ್ ಆರೋಗ್ಯ ಸಾಕಷ್ಟು ಹದಗೆಟ್ಟಿದೆ ಎನ್ನಲಾಗ್ತಿದೆ.
ಅನಾರೋಗ್ಯದಿಂದಾಗಿಯೇ ಪುಟಿನ್‌ಗೆ ಉಕ್ರೇನ್ ಯುದ್ಧದ ಕುರಿತಂತೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲವಂತೆ. ಪುಟಿನ್ ಅನುಪಸ್ಥಿತಿಯಲ್ಲಿ ಮಾಜಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಮತ್ತು ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಹೆಚ್ಚಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಊದಿಕೊಂಡ ಮುಖ, ಕೈ ಕಾಲುಗಳಲ್ಲೂ ಸಮಸ್ಯೆ
ಪುಟಿನ್ ಅವರ ಇತ್ತೀಚಿನ ಫೋಟೋಗಳನ್ನು ನೋಡಿದ್ರೆ ಮುಖ ಊದಿಕೊಂಡಿರೋದು ಸ್ಪಷ್ಟವಾಗಿದೆ. ಅವರ ಕೈಕಾಲುಗಳಲ್ಲಿ ನಡುಕವಿದೆಯಂತೆ. ವಾಸಿಯಾಗದ ಕಾಯಿಲೆಯಿಂದ ಪುಟಿನ್ ಬಳಲುತ್ತಿದ್ದಾರೆ ಅನ್ನೋದು ಎಲ್ಲೆಡೆ ಹರಡಿರುವ ವದಂತಿ. ಆದ್ರೆ ಈ ಬಗ್ಗೆ ರಷ್ಯಾದಿಂದ ಅಧಿಕೃತ ಮಾಹಿತಿ ಬಂದಿಲ್ಲ.