ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಆರಂಭವಾಗುವ ಮುನ್ನ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮಾಜಿ ಸಚಿವ ಸುಧಾಕರ್ ಅವರು 12 ಲಕ್ಷ ರೂಪಾಯಿಗಳಿಗೆ ‘ಮುಕ್ತಿ ಬಾವುಟ’ ವನ್ನು ಪಡೆದುಕೊಂಡಿದ್ದಾರೆ.
ಗುರುವಾರ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡುವ ಮೊದಲು ಹರಾಜು ಪ್ರಕ್ರಿಯೆ ನಡೆದಿದ್ದು, ಒಂದು ಲಕ್ಷ ರೂಪಾಯಿಗಳಿಂದ ಇದು ಆರಂಭವಾಗಿತ್ತು. ಅಂತಿಮವಾಗಿ 12 ಲಕ್ಷ ರೂಪಾಯಿಗಳಿಗೆ ಡಿ. ಸುಧಾಕರ್ ಅವರು ಮುಕ್ತಿ ಬಾವುಟವನ್ನು ಪಡೆದುಕೊಂಡರು. ಕಳೆದ ಬಾರಿ ಬೆಂಗಳೂರಿನ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು ಇದನ್ನು 5 ಲಕ್ಷ ರೂಪಾಯಿಗಳಿಗೆ ಪಡೆದುಕೊಂಡಿದ್ದರು.
ರಥದ ತುದಿಗೆ ಕಟ್ಟುವ ಗುಲಾಬಿ ಬಣ್ಣದ ಬಾವುಟವೇ ಮುಕ್ತಿ ಬಾವುಟವಾಗಿದ್ದು, ಇದನ್ನು ಖರೀದಿಸಿದರೆ ಎಲ್ಲ ಕೆಲಸಗಳಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ಪ್ರತೀತಿ ಇದೆ. ಈ ಹಿನ್ನಲೆಯಲ್ಲಿ ರಾಜಕಾರಣಿಗಳು, ಉದ್ಯಮಿಗಳು ಹರಾಜು ಪ್ರಕ್ರಿಯೆಯಲ್ಲಿ ಇದನ್ನು ಖರೀದಿಸಲು ಮುಗಿಬೀಳುತ್ತಾರೆ.
ಮುಕ್ತಿ ಬಾವುಟ ಹರಾಜು ಪೂರ್ಣಗೊಂಡ ಬಳಿಕ ಬ್ರಹ್ಮರಥೋತ್ಸವ ನಡೆದಿದ್ದು, ಇದಕ್ಕೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಚಾಲನೆ ನೀಡಿದರು. ಬ್ರಹ್ಮರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಹಲವರು ತಮ್ಮ ನಿವಾಸದ ಮುಂದೆಯೇ ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು.