ಭಾರತೀಯ ರೈಲ್ವೆ ಇಲಾಖೆ ಮುಂಬೈನಲ್ಲಿ ಎಸಿ ಲೋಕಲ್‌ನಲ್ಲಿ ಪ್ರಯಾಣಿಸುವವರಿಗೆ ಬಂಪರ್ ಕೊಡುಗೆ ನೀಡ್ತಾ ಇದೆ. ರೈಲು ಪ್ರಯಾಣ ದರವನ್ನು ಶೇ.50ರಷ್ಟು ಕಡಿಮೆ ಮಾಡುತ್ತಿದೆ. ಹೊಸ ದರವು ಮೇ 5 ರಿಂದ ಅನ್ವಯವಾಗಲಿದೆ. ಪ್ರಸ್ತುತ 5 ಕಿ.ಮೀ.ವರೆಗೆ ಕನಿಷ್ಠ ದರ 65 ರೂಪಾಯಿ ಇತ್ತು. ಅದನ್ನೀಗ 30 ರೂಪಾಯಿಗೆ ಇಳಿಸಲಾಗುತ್ತಿದೆ.
ಸಾರ್ವಜನಿಕರ ಬಹುದಿನಗಳ ಬೇಡಿಕೆಯನ್ನು ಒಪ್ಪಿಕೊಂಡು ರೈಲ್ವೆ ಸಚಿವಾಲಯ ಪ್ರಯಾಣ ದರವನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಮುಂಬೈನಲ್ಲಿ ಎಸಿ ಲೋಕಲ್ ಪ್ರಯಾಣ ದರ ಕಡಿತ ಮಾಡುವಂತೆ ಸರ್ಕಾರಕ್ಕೆ ಹಲವು ಸಲಹೆಗಳು ಬಂದಿದ್ದವು. ಪ್ರಯಾಣ ದರವನ್ನು ಶೇ.20 ರಿಂದ 30 ರಷ್ಟು ಕಡಿಮೆ ಮಾಡಲು ಮನವಿ ಮಾಡಲಾಗಿತ್ತು.
ಸಿಎಸ್‌ಎಂಟಿಯಿಂದ ಥಾಣೆ ನಡುವಣ ಪ್ರಯಾಣ ದರ ಪ್ರಸ್ತುತ 130 ರೂಪಾಯಿ ಇದೆ. ಈಗ ಅದನ್ನು 90 ರೂಪಾಯಿಗೆ ಇಳಿಸಲಾಗಿದೆ. ಕಲ್ಯಾಣ್‌ನಿಂದ ಸಿಎಸ್‌ಎಂಟಿ ಪ್ರಯಾಣ ದರವನ್ನು 210 ರೂಪಾಯಿಯಿಂದ 105 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಅದೇ ರೀತಿ ಇತರೆ ಮಾರ್ಗಗಳ ಪ್ರಯಾಣ ದರವನ್ನೂ ಅರ್ಧದಷ್ಟು ಕಡಿಮೆ ಮಾಡಲಾಗಿದೆ. ದರ ಇಳಿಕೆಯ ನಂತರ ಎಸಿ ಲೋಕಲ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಇಲ್ಲಿಯವರೆಗೆ ಕೆಲವೇ ಕೆಲವು ಪ್ರಯಾಣಿಕರು ಎಸಿ ಲೋಕಲ್‌ನಲ್ಲಿ ಪ್ರಯಾಣಿಸುತ್ತಿದ್ದರು.