ರಸ್ತೆಯಲ್ಲಿರೋ ಯಮಸ್ವರೂಪಿ ಗುಂಡಿಗಳಿಗೆ ಅದೆಷ್ಟು ಅಮಾಯಕ ಜೀವಗಳು ಬಲಿಯಾದ್ರೂ ಸರ್ಕಾರಗಳು ಮಾತ್ರ ಎಚ್ಚೆತ್ತುಕೊಳ್ತಾ ಇಲ್ಲ. ಭಾರೀ ಮಳೆಯಿಂದಾಗಿ ಮುಂಬೈನ ರಸ್ತೆಗಳಂತೂ ಗಬ್ಬೆದ್ದು ಹೋಗಿವೆ. ದೊಡ್ಡ ದೊಡ್ಡ ಗುಂಡಿಗಳು ಬಲಿಗಾಗಿ ಕಾದು ಕುಳಿತಿವೆ.
ಈ ಮಧ್ಯೆ ಬಸ್ ಚಾಲಕನೊಬ್ಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾನೆ. ಈತ ಪ್ರತಿದಿನ ಭಿವಂಡಿ-ಕಲ್ಯಾಣ್ ರೋಡ್‌ನಲ್ಲಿ ಸಂಚರಿಸ್ತಾನೆ. ಬೃಹತ್ ಗುಂಡಿಗಳಿಂದಾಗಿ ಇಲ್ಲಿ ಬಸ್ ಓಡಿಸೋದು ಕೂಡ ದುಸ್ತರವಾಗಿದೆ ಅನ್ನೋದು ಚಾಲಕನ ಅಳಲು.
ರಸ್ತೆಯ ದುರವಸ್ಥೆ, ಗುಂಡಿಗಳನ್ನು ವಿಡಿಯೋ ಮಾಡಿರುವ ಚಾಲಕ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರ ಬಳಿ ತಕ್ಷಣ ರಸ್ತೆ ದುರಸ್ಥಿ ಮಾಡಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಮರಾಠಿಯಲ್ಲಿ ಮಾತನಾಡಿರೋ ಈ ಚಾಲಕನ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗಿ ಗಂಟೆ ಕಳೆಯುವಷ್ಟರಲ್ಲಿ 3000 ಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದರು.
ಚಾಲಕನ ಮಾತಿನ ಧಾಟಿ, ಆತ ಸಿಎಂಗೆ ಕಳಕಳಿಯಿಂದ ಮನವಿ ಮಾಡ್ತಿರೋ ವಿಧಾನ ಇವೆಲ್ಲವೂ ನೆಟ್ಟಿಗರಿಗೆ ಇಷ್ಟವಾಗಿದೆ. ಆದಷ್ಟು ಬೇಗ ಈ ಸಂದೇಶ ಮುಖ್ಯಮಂತ್ರಿಗಳನ್ನು ತಲುಪಲಿ ಎನ್ನುತ್ತಿದ್ದಾರೆ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು. ಸರ್ಕಾರ ಯಾವುದೇ ಇರಲಿ, ಸಿಎಂ ಯಾರೇ ಇರಲಿ ಪ್ರತಿವರ್ಷ ರಸ್ತೆ ಇದೇ ದುಃಸ್ಥಿತಿಯಲ್ಲಿರುತ್ತದೆ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.