ಮಂಗಳೂರು: ಇತ್ತೀಚೆಗಷ್ಟೇ ಮುಂಬೈನಿಂದ ಮಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪೈಲಟ್ ಟೇಕಾಫ್ ಆಗುವ ಮುನ್ನ ತುಳು ಭಾಷೆಯಲ್ಲಿ ವಿಮಾನ ಹಾರಾಟದ ಪೂರ್ವ ಘೋಷಣೆ ಮಾಡಿದ್ದು, ಅದರಲ್ಲಿದ್ದ ಪ್ರಯಾಣಿಕರಿಗೆ ಅಚ್ಚರಿ ಕಾದಿತ್ತು.
ಪ್ರಯಾಣಿಕರು ತಮ್ಮ ಆಸನಗಳಲ್ಲಿ ಕುಳಿತು ಟೇಕಾಫ್‌ಗೆ ತಯಾರಿ ನಡೆಸುತ್ತಿರುವಾಗ, ವಿಮಾನದ ಅಧಿಕಾರಿ ತುಳುವಿನಲ್ಲಿ ಅನೌನ್ಸ್ ಮಾಡಿದ್ದು ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ. ತುಳು ಭಾಷೆಯನ್ನು ಮುಖ್ಯವಾಗಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿಯಲ್ಲಿ ಮಾತನಾಡುತ್ತಾರೆ.
ಡಿಸೆಂಬರ್ 24 ರಂದು ನಂ. 6E 6051 ವಿಮಾನವು ಮುಂಬೈನಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಅಧಿಕಾರಿ ಪ್ರದೀಪ್ ಪದ್ಮಶಾಲಿ ಅವರು ತುಳುವಿನಲ್ಲಿ ಎಲ್ಲಾ ಪ್ರಯಾಣಿಕರನ್ನು ಸ್ವಾಗತಿಸಿದ್ದಾರೆ. ಮತ್ತು ಪ್ರಯಾಣದ ಸಮಯದಲ್ಲಿ ಆರಾಮದಾಯಕ ಪ್ರಯಾಣವನ್ನು ಹಾರೈಸಿದ್ದಾರೆ. ನಂತರ ಅವರು ಅದನ್ನು ಇಂಗ್ಲಿಷ್‌ನಲ್ಲಿ ಹೇಳಿದ್ದು, ದಕ್ಷಿಣ ಕನ್ನಡದಲ್ಲಿ ಮಾತನಾಡುವ ಅವರ ಮಾತೃಭಾಷೆ ತುಳು ಎಂದು ಪ್ರಯಾಣಿಕರಿಗೆ ತಿಳಿಸಿದ್ದಾರೆ.
ಈ ವಿಮಾನವು ಮುಂಬೈಯಿಂದ ಹೊರಟು ಸರಿಸುಮಾರು ಒಂದು ಗಂಟೆ ಐದು ನಿಮಿಷ ಪ್ರಯಾಣ ಮಾಡುವ ಅಂದಾಜಿದೆ. ದಯಮಾಡಿ ಎಲ್ಲರೂ ಆರಾಮಾದಲ್ಲಿ ಕುಳಿತು, ವಿಮಾನ ಪ್ರಯಾಣವನ್ನು ಆನಂದಿಸಬೇಕು ಎನ್ನುವುದು ನಮ್ಮ ಅಭಿಲಾಷೆ. ಇವತ್ತು ನಮ್ಮ ಜೊತೆ ಪ್ರಯಾಣ ಮಾಡುತ್ತಿರುವ ನಿಮಗೆಲ್ಲರಿಗೂ ಧನ್ಯವಾದ ಎಂದು ಅಧಿಕಾರಿ ಪ್ರದೀಪ ಪದ್ಮಶಾಲಿ ತುಳುವಿನಲ್ಲಿ ಘೋಷಿಸಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಪೈಲಟ್ ತನ್ನ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಿದ್ದಕ್ಕಾಗಿ ವ್ಯಾಪಕ ಪ್ರಶಂಸೆಗೆ ಒಳಗಾಗಿದ್ದಾರೆ. ಈ ಸಮಯದಲ್ಲಿ ಘೋಷಣೆಗಳನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಮಾಡಲಾಗುತ್ತದೆ.