ಮುಂಬೈ : ದೇಶದಲ್ಲಿ ಮತ್ತೆ ಕೊರೊನಾ ಸ್ಫೋಟಗೊಳ್ಳುತ್ತಿದ್ದು, ಕೆಲವು ನಗರಗಳಲ್ಲಿ ಸೋಂಕಿತರ ಸಂಖ್ಯೆ ವಿಪರೀತ ಹೆಚ್ಚಳವಾಗುತ್ತಿದೆ.
ಮುಂಬಯಿಯಲ್ಲಿಯಂತೂ ಪರಿಸ್ಥಿತಿ ಹೇಳತೀರದಾಗಿದ್ದು, ಕಳೆದ 24 ಗಂಟೆಗಳಲ್ಲಿ 10,860 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಎಎನ್ ಐ ಟ್ವೀಟ್ ಮೂಲಕ ತಿಳಿಸಿದೆ.
ಅಲ್ಲದೇ, ಮಹಾರಾಷ್ಟ್ರದಲ್ಲಿ ಇದೇ ಸಮಯದಲ್ಲಿ 18,466 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 20 ಜನ ಬಲಿಯಾಗಿದ್ದಾರೆ. ಈ ಮೂಲಕ ಅಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಏರಿಕೆಯಾಗಿದ್ದು, 66,308ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಓಮಿಕ್ರಾನ್ ಸೋಂಕಿತರ ಸಂಖ್ಯೆ ಕೂಡ ಏರಿಕೆಯಾಗುತ್ತಿದ್ದು, 653ಕ್ಕೆ ಏರಿಕೆ ಕಂಡಿದೆ.
ಮುಂಬೈ ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ, ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಕೂಡ ಹೆಚ್ಚಳವಾಗುತ್ತಿದೆ. ಹೀಗಾಗಿ ಆಸ್ಪತ್ರೆಗಳಲ್ಲಿನ ಬೆಡ್ ಗಳು ಮತ್ತೆ ಸೋಂಕಿತರಿಂದ ತುಂಬುತ್ತಿವೆ. ಆಮ್ಲಜನಕದ ಅಗತ್ಯತೆ ಕೂಡ ಅಲ್ಲಿ ಹೆಚ್ಚಳವಾಗುತ್ತಿದ್ದು, ಈಗಾಗಲೇ 52 ಜನರಿಗೆ ಆಮ್ಲಜನಕದ ಅಗತ್ಯವಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.