ಶಿವಮೊಗ್ಗ ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಹಳ್ಳ ಕೊಳ್ಳಗಳು, ಕೆರೆ ಕಟ್ಟೆಗಳಿಗೆ ಹೆಚ್ಚಿನ ನೀರು ಬಂದಿದೆ.
ಕೃಷಿ ಚಟುವಟಿಕೆಗಳು ಕೂಡ ಚುರುಕಾಗಿದ್ದು, ಭತ್ತದ ಸಸಿ ಮಡಿಗಳನ್ನು ಮಾಡಲು ರೈತರು ಗದ್ದೆಗಳಲ್ಲಿ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ. ಮಳೆ ಬಿಡುವು ನೀಡಿದ ಕಡೆಗಳಲ್ಲಿ ಕೃಷಿ ಕಾರ್ಯಗಳು ಭರದಿಂದ ಸಾಗಿವೆ.
ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಶರಾವತಿ ಲಿಂಗನಮಕ್ಕಿ ಜಲಾಶಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳಹರಿವು 47,968 ಕ್ಯೂಸೆಕ್ ಇದೆ. ಡ್ಯಾಂ ನೀರಿನ ಮಟ್ಟ 1775.35 ಅಡಿಯಿದೆ.
ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, 28,061 ಕ್ಯೂಸೆಕ್ ಒಳಹರಿವು ಇದೆ.
ತುಂಗಾ ಜಲಾಶಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಜಲಾಶಯಕ್ಕೆ 58,770 ಕ್ಯೂಸೆಕ್ ಒಳಹರಿವು ಇದೆ. ಡ್ಯಾಂನಿಂದ 51,380 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನಗರದ ವ್ಯಾಪ್ತಿಯಲ್ಲಿ ಹರಿಯುವ ತುಂಗಾ ನದಿ ಅಪಾಯದ ಮಟ್ಟಕ್ಕೇರಿದ್ದು, ಕೋರ್ಪಲಯ್ಯನ ಛತ್ರದ ತುಂಗಾ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ.