ಮುಂದಿನ ಒಂದು ವರ್ಷದೊಳಗೆ ರೈಲ್ವೆ, ಅಂಚೆ, ರಕ್ಷಣಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 10 ಲಕ್ಷ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲಾಗುತ್ತದೆ. ನರೇಂದ್ರ ಮೋದಿಯವರು ಈ ಹಿಂದೆ ನೀಡಿದ ಭರವಸೆಯಂತೆ ಇದನ್ನು ಈಡೇರಿಸಲಾಗುತ್ತದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಶೋಭಾ ಕರಂದ್ಲಾಜೆ, ಹುಬ್ಬಳ್ಳಿಯಲ್ಲಿ ಪಾಲ್ಗೊಂಡು ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು.
ನರೇಂದ್ರ ಮೋದಿಯವರು ದೂರ ದೃಷ್ಟಿ ಹೊಂದಿರುವ ನಾಯಕರಾಗಿದ್ದಾರೆ. ಹೀಗಾಗಿ ದೇಶ ಪ್ರಗತಿಯತ್ತ ಸಾಗುತ್ತಿದೆ ಎಂದು ಹೇಳಿದ ಶೋಭಾ ಕರಂದ್ಲಾಜೆ, ಈ ಹಿಂದೆ ರೈಲು ಹಾಗೂ ರೈಲು ನಿಲ್ದಾಣಗಳು ಗಬ್ಬು ನಾರುತ್ತಿದ್ದವು. ಇದೀಗ ವಿಮಾನ ನಿಲ್ದಾಣದ ರೀತಿಯಲ್ಲಿ ಅಭಿವೃದ್ಧಿಯಾಗಿವೆ ಎಂದು ಹೇಳಿದರು.