ರಾಜ್ಯದಲ್ಲಿ ಈಗಾಗಲೇ ಮುಂಗಾರು ಆಗಮನವಾಗಿದ್ದರೂ ಸಹ ನಿರೀಕ್ಷೆಯಂತೆ ಮಳೆ ಆಗಿಲ್ಲ. ಮುಂಗಾರು ಪೂರ್ವ ಮಳೆ ಉತ್ತಮ ರೀತಿಯಲ್ಲಿ ಸುರಿದ ಕಾರಣ ಈ ಬಾರಿಯ ಮುಂಗಾರು ಮಳೆ ಕೂಡ ಚೆನ್ನಾಗಿರಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಕೃಷಿ ಕಾರ್ಯಗಳಿಗೆ ಚಾಲನೆ ನೀಡಿದ್ದರು.
ಆದರೆ ನಿಗದಿತ ದಿನಾಂಕ ಕಳೆದರೂ ಸಹ ಮಳೆಯಾಗದ ಕಾರಣ ಆತಂಕದಲ್ಲಿದ್ದರು. ಇದೀಗ ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದೆ. ಇಂದಿನಿಂದ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಯನ್ನು ನೀಡಲಾಗಿದೆ.
ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶನಿವಾರದಿಂದಲೇ ಮಳೆ ಬಿರುಸಿನಿಂದ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಯಾದಗಿರಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಧಾರವಾಡ, ಬಾಗಲಕೋಟೆ, ಗದಗ, ಹಾವೇರಿ, ಬೆಳಗಾವಿ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಗಳಲ್ಲೂ ಭಾರಿ ಮಳೆಯಾಗಲಿದೆ ಎಂದು ಹೇಳಲಾಗಿದೆ.