ಈ ಬಾರಿ ಅವಧಿಗಿಂತ ಮೊದಲು ಮುಂಗಾರು ಮಳೆ ಸುರಿಯಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದರೂ ಸಹ ಮುಂಗಾರು ಆರಂಭವಾಗಿ ವಾರಗಳೇ ಕಳೆದಿದ್ದರೂ ವ್ಯಾಪಕ ಮಳೆ ಆಗುತ್ತಿಲ್ಲ. ಇದರಿಂದಾಗಿ ಬಿತ್ತನೆ ಚಟುವಟಿಕೆಗೆ ಸಿದ್ಧರಾಗಿದ್ದ ರೈತರಿಗೆ ಆತಂಕ ಶುರುವಾಗಿದೆ.
ಈ ಹಿನ್ನೆಲೆಯಲ್ಲಿ ಹವಾಮಾನ ತಜ್ಞರು ಮತ್ತೊಂದು ಮಾಹಿತಿ ನೀಡಿದ್ದು, ಇಡೀ ದೇಶದಲ್ಲೇ ಮುಂಗಾರು ದುರ್ಬಲಗೊಂಡಿದ್ದು, ವಾಡಿಕೆಯಂತೆ ಮಳೆ ಆಗಲು ಇನ್ನೂ ಕೆಲದಿನಗಳು ಬೇಕಾಗಬಹುದು ಎಂದು ತಿಳಿಸಿದ್ದಾರೆ.
ಈ ಬಾರಿ ಮುಂಗಾರು ಪೂರ್ವ ಮಳೆ ನಿರೀಕ್ಷೆಗೂ ಮೀರಿ ಸುರಿದಿದ್ದು, ಒಂದಷ್ಟು ಕೆರೆಕಟ್ಟೆಗಳು ತುಂಬಿದ್ದವು. ಮುಂಗಾರು ಮಳೆಯೂ ಕೂಡಾ ವಾಡಿಕೆಯಂತೆ ಸುರಿದರೆ ಕೃಷಿ ಚಟುವಟಿಕೆಗಳ ಜೊತೆಗೆ ಕುಡಿಯುವ ನೀರು, ವಿದ್ಯುತ್ ಪೂರೈಕೆಗೆ ಯಾವುದೇ ತೊಂದರೆಯಾಗುವುದಿಲ್ಲ. ಪ್ರಸ್ತುತ ಮುನ್ಸೂಚನೆಯನ್ನು ಗಮನಿಸಿದರೆ ಮೂರು ದಿನಗಳ ಬಳಿಕ ಮಳೆ ಬಿರುಸು ಪಡೆದುಕೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.