ಬೆಂಗಳೂರು: ರಾಜಸ್ಥಾನದಲ್ಲಿ ಕಾಂಗ್ರೆಸ್ ಚಿಂತನಾ ಸಭೆ ನಡೆಯುತ್ತಿದೆ. ರಾಹುಲ್ ಗಾಂಧಿಗೆ ಮತ್ತೆ ಎಐಸಿಸಿ ಪಟ್ಟ ಕಟ್ಟುವ ಚರ್ಚೆ ನಡೆಯುತ್ತಿದೆ. ಇದೇ ವೇಳೆ ಸಿದ್ದರಾಮಯ್ಯ ಬಣ ಡಿಕೆಶಿ ವಿರುದ್ಧ ಒಳಸಂಚು ನಡೆಸುತ್ತಿದೆ. ಭ್ರಷ್ಟಾಧ್ಯಕ್ಷರಿಗೆ ರಮ್ಯಾ ಮಂಗಳಾರತಿ ಮಾಡಿದರೆ, ಸಿದ್ದರಾಮಯ್ಯ ಆಪ್ತರು ರಮ್ಯಾ ಪರ ನಿಲ್ಲುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ಟೀಕಿಸಿದೆ.
ಇಷ್ಟು ದಿನಗಳ ಕಾಲ “ಅಂತರ್ಧಾನ” ಸ್ಥಿತಿಯಲ್ಲಿದ್ದ ರಮ್ಯಾ ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಾ ಹಠಾತ್ ಪ್ರತ್ಯಕ್ಷರಾಗಿದ್ದಾರೆ. ಈ ಅನಿರೀಕ್ಷಿತ ದಾಳಿಯ ಹಿಂದೆ ಮೀರ್‌ಸಾದಿಕ್ ಕೈವಾಡವಿದೆ. ಡಿಕೆಶಿ ಅವರೇ, ನಿಮ್ಮ ವಿರೋಧಿ ಶಕ್ತಿಗಳ ಕೈ ಮೇಲಾಗುತ್ತಿದೆಯೇ ? ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ.
ಮಾಜಿ ಸಚಿವ ಮಹಾದೇವಪ್ಪ ಅವರು ರಮ್ಯಾ ಪರ ಬ್ಯಾಟ್ ಬೀಸಿದ್ದಾರೆಯೇ ಹೊರತು ಡಿಕೆಶಿ ಪರವಲ್ಲ ! ಮಹಾದೇವಪ್ಪ, ಸಿದ್ದರಾಮಯ್ಯ ಅತ್ಯಾಪ್ತರಲ್ಲೋರ್ವರು. ಸಿದ್ದರಾಮಯ್ಯ ಆಪ್ತರೆಲ್ಲಾ ರಮ್ಯಾ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಇದೆಲ್ಲ ಏನನ್ನು ಸೂಚಿಸುತ್ತದೆ ? ಮೀರ್ ಸಾದಿಕ್ ಬಣ ಡಿಕೆಶಿಯನ್ನು ಹರಕೆಯ ಕುರಿಯಾಗಿಸಲು ಹೊರಟಿದೆಯೇ ? ಡಿಕೆಶಿ ಅವರೇ, ನಿಮ್ಮ ವಿರುದ್ಧ ಈಗ ನಡೆಯುತ್ತಿರುವುದು ಮೀರ್‌ಸಾದಿಕ್ ಬಣದ ಸಂಚು. ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮನ್ನು ಹಾಗೂ ನಿಮ್ಮ ತಂಡವನ್ನು ರೌಡಿಪಟ್ಟಿಗೆ ಸೇರಿಸುವ ತಂತ್ರ ನಡೆಯುತ್ತಿದೆ ಎಂದು ಎಚ್ಚರಿಸಿದೆ.
ನನಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನಮಾನ ಕೊಡಿಸಿದ್ದು ರಾಹುಲ್ ಗಾಂಧಿ ಅವರೇ ಹೊರತು ಬೇರೆ ಯಾವುದೇ ಅವಕಾಶವಾದಿಗಳಲ್ಲ ಎಂದು ರಮ್ಯಾ ಹೇಳಿದ್ದಾರೆ. ಇದೇ ವೇಳೆ ಮುಂದಿನ ಅಧ್ಯಕ್ಷ ರಾಹುಲ್ ಗಾಂಧಿ ಆಗಲಿ ಎಂಬ ಅಭಿಪ್ರಾಯ ರಾಜಸ್ಥಾನದ ಚಿಂತನ ಶಿಬಿರದಲ್ಲಿ ಕೇಳಿಬಂದಿದೆ. ಅಲ್ಲದೇ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಡಿಕೆಶಿ ಹರಕೆಯ ಕುರಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದೆ.