ಕ್ಯಾಪ್ಟನ್ ಟಿಮ್ ರೈಡರ್ ಎಂಬುವವರು ಎಂದಿನಂತೆ ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಸುಮಾರು 12,000 ವರ್ಷಗಳಷ್ಟು ಹಳೆಯದಾದ ವೂಲಿ ಮ್ಯಾಮತ್ ನ ಬೃಹದಾಕಾರದ ಹಲ್ಲನ್ನು ಸೆರೆಹಿಡಿದಿದ್ದಾರೆ.
ಮ್ಯಾಸಚೂಸೆಟ್ಸ್‌ನ ನ್ಯೂಬರಿಪೋರ್ಟ್‌ನ ಕರಾವಳಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಅವರು ಸುಮಾರು 11 ಇಂಚುಗಳಷ್ಟು ಉದ್ದವಿರುವ ಅಪರೂಪದ ವಸ್ತುವನ್ನು ಕಂಡುಕೊಂಡಿದ್ದಾರೆ. ಇದೀಗ ವೂಲಿ ಮ್ಯಾಮತ್ ನ ಬೃಹದಾಕಾರದ ಹಲ್ಲನ್ನು ಹರಾಜಿಗೆ ಇಟ್ಟಿರುವ ಅವರು ಬಂದ ಹಣವನ್ನು ಯುದ್ಧ ಪೀಡಿತ ಉಕ್ರೇನ್ ಜನರಿಗೆ ದಾನ ಮಾಡಲು ನಿರ್ಧರಿಸಿದ್ದಾರೆ.
ನ್ಯೂ ಇಂಗ್ಲೆಂಡ್ ಫಿಶ್‌ಮಾಂಗರ್ಸ್‌ನ ಕ್ಯಾಪ್ಟನ್ ಮತ್ತು ಸಹ-ಮಾಲೀಕ ರೈಡರ್ ತಾನು ಹಿಡಿದಿರುವ ವಸ್ತುವನ್ನು ನ್ಯೂ ಹ್ಯಾಂಪ್‌ಶೈರ್ ವಿಶ್ವವಿದ್ಯಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ. ತಜ್ಞರು ಇದನ್ನು ಸಾವಿರಾರು ವರ್ಷಗಳ ಹಿಂದೆ ಭೂಮಿಯಲ್ಲಿ ವಾಸಿಸುತ್ತಿದ್ದ ವೂಲಿ ಮ್ಯಾಮತ್ ಎಂಬ ಜೀವಿಯ ಬೃಹತ್ ಗಾತ್ರದ ಹಲ್ಲು ಎಂದು ಗುರುತಿಸಿದ್ದಾರೆ.
ಸದ್ಯ, ಈ ಬೃಹತ್ ಗಾತ್ರದ ಹಲ್ಲನ್ನು ಹರಾಜಿಗಿಡಲಾಗಿದ್ದು, ಇದರಿಂದ ಬರುವ ಎಲ್ಲಾ ಆದಾಯವು ವರ್ಲ್ಡ್ ಸೆಂಟ್ರಲ್ ಕಿಚನ್‌ಗೆ ಕಳುಹಿಸಲಾಗುತ್ತದೆ. ಇದು ಪೋಲೆಂಡ್‌ನಲ್ಲಿರುವ ಉಕ್ರೇನಿಯನ್ ನಿರಾಶ್ರಿತರಿಗೆ ಆಹಾರವನ್ನು ಒದಗಿಸಲು ಕೆಲಸ ಮಾಡುವ ಸಂಸ್ಥೆಯಾಗಿದೆ. ಇಂದಿನ ಆನೆಗಳಂತೆ ಹೋಲುತ್ತಿದ್ದ ದೈತ್ಯ ಪ್ರಾಣಿಯಾದ ವೂಲಿ ಮ್ಯಾಮತ್ ಸುಮಾರು 4,000 ವರ್ಷಗಳ ಹಿಂದೆ ಅಳಿದುಹೋಗಿದೆ.