ಮೀಟರ್ ಬಡ್ಡಿ ದಂಧೆ ಎಂಬುದು ಬಡ ಜನರ ಪಾಲಿಗೆ ಒಂದು ದುಃಸ್ವಪ್ನ. ಬ್ಯಾಂಕುಗಳು ಕೇಳುವ ದಾಖಲೆಗಳನ್ನು ನೀಡಲಾಗದೆ ಅನಿವಾರ್ಯವಾಗಿ ಮೀಟರ್ ಬಡ್ಡಿ ದಂಧೆಕೋರರಿಂದ ಹಣ ಪಡೆದುಕೊಳ್ಳುವ ಇವರುಗಳು ಸಕಾಲಕ್ಕೆ ತೀರಿಸಲಾಗದೆ ಪರಿತಪಿಸುತ್ತಿರುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ಅಸಲಿಗಿಂತ ಬಡ್ಡಿಯೇ ಮೂರ್ನಾಲ್ಕು ಪಟ್ಟು ಹೆಚ್ಚು ಹಿಂದಿರುಗಿಸಿರುತ್ತಾರೆ. ಹೀಗೆ ಮೀಟರ್ ಬಡ್ಡಿ ಉರುಳಿಗೆ ಸಿಲುಕಿದ್ದ ಯುವಕನೊಬ್ಬನ ಸಂಕಷ್ಟಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಮಧ್ಯರಾತ್ರಿಯಲ್ಲೂ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪ್ರಕರಣದ ವಿವರ: ತೀರ್ಥಹಳ್ಳಿ ಪಟ್ಟಣದ ಯುವಕನೊಬ್ಬ ಮಾಂಸ ವ್ಯಾಪಾರ ಮಾಡುತ್ತಿದ್ದು, ತನ್ನ ಕಾರನ್ನು ಅಡವಿಟ್ಟು ಕಡೂರು ಮೂಲದ ವ್ಯಕ್ತಿಯಿಂದ ಸಾಲ ಪಡೆದುಕೊಂಡಿದ್ದ. ಆ ವ್ಯಕ್ತಿ ನಾಲ್ಕು ಪಟ್ಟು ಬಡ್ಡಿ ವಿಧಿಸಿದ್ದು ಇತ್ತೀಚೆಗೆ ಪೊಲೀಸ್ ಸಿಬ್ಬಂದಿಯನ್ನು ಕರೆದುಕೊಂಡು ಬಂದು ನಿಂತ ಜಾಗದಲ್ಲಿಯೇ ಸಾಲ ಮರು ಪಾವತಿಸು ಎಂದು ಯುವಕನಿಗೆ ದಬಾವಣೆ ಮಾಡಿದ್ದಾನೆ. ಯುವಕ ಪರಿಪರಿಯಾಗಿ ಕೇಳಿಕೊಂಡರೂ ಆತನ ಮನ ಕರಗಿಲ್ಲ.
ಅಲ್ಲದೆ ಮೀಟರ್ ಬಡ್ಡಿ ದಂಧೆಕೋರನ ಜೊತೆ ಪೊಲೀಸರು ಇದ್ದು, ಇದರಿಂದ ಯುವಕ ಮತ್ತಷ್ಟು ಭಯಭೀತನಾಗಿದ್ದಾನೆ. ಕಡೆಗೆ ಬೇರೆ ದಾರಿ ಕಾಣದೆ ರಾತ್ರಿ ಸುಮಾರು 2:30ರ ಸುಮಾರಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಕರೆ ಮಾಡಿ ತನ್ನ ಅಸಹಾಯಕತೆಯನ್ನು ವಿವರಿಸಿದ್ದು, ಯುವಕನ ಪರಿಸ್ಥಿತಿಯನ್ನು ಅರಿತ ಸಚಿವರು ಪೊಲೀಸರಿಗೆ ಫೋನ್ ನೀಡುವಂತೆ ಹೇಳಿದ್ದಾರೆ. ಬಳಿಕ ಪೊಲೀಸರಿಗೆ ತರಾಟೆಗೆ ತೆಗೆದುಕೊಂಡ ಅವರು ಯುವಕ ಪಡೆದುಕೊಂಡ ಸಾಲಕ್ಕೆ ನ್ಯಾಯಯುತ ಬಡ್ಡಿ ಪಡೆದು ವ್ಯವಹಾರ ಬಗೆಹರಿಸುವಂತೆ ತಾಕೀತು ಮಾಡಿದ್ದಾರೆ.