ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಣೆ ಮಾಡಿ ಐದು ದಿನಗಳು ಕಳೆಯುತ್ತಾ ಬಂದರೂ ಯುದ್ಧದ ಕಾವು ಇನ್ನೂ ಕಮ್ಮಿಯಾದಂತೆ ಕಾಣುತ್ತಿಲ್ಲ.
ರಷ್ಯಾದ ಪ್ರಬಲ ಸೇನೆಗೆ ತಕ್ಕ ಮಟ್ಟದ ಠಕ್ಕರ್ ನೀಡುವಲ್ಲಿ ಉಕ್ರೇನ್ ಕೂಡ ಯಶಸ್ವಿಯಾಗಿದೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ ಈವರೆಗೆ 4,500 ಮಂದಿ ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ನಾಲ್ಕು ದಿನಗಳಲ್ಲಿ 16 ಮಕ್ಕಳು ಸಾವನ್ನಪ್ಪಿದ್ದರೆ 45 ಮಂದಿ ಗಾಯಗೊಂಡಿದ್ದಾರೆ ಎಂದು ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ಮಿಶೆಲ್ ಬ್ಯಾಚೆಲೆಟ್ ಜಿನೀವಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಿರಬಹುದು ಎಂದು ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ಹೆಚ್ಚಿನವರು ಭಾರೀ ಫಿರಂಗಿ ದಾಳಿ ಹಾಗೂ ಕ್ಷಿಪಣಿ ದಾಳಿ ಸೇರಿದಂತೆ ಹೆಚ್ಚಿನ ಸ್ಫೋಟಕ ಶಸ್ತ್ರಾಸ್ತ್ರಗಳಿಂದ ಮೃತಪಟ್ಟಿದ್ದಾರೆ ಎಂದು ಬ್ಯಾಚೆಲೆಟ್ ಹೇಳಿದ್ದಾರೆ.