ಬೆಂಗಳೂರು: ರಾಜ್ಯ ಹಾಗೂ ದೇಶದಲ್ಲಿ ಕೊರೊನಾ, ಒಮಿಕ್ರಾನ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾ ಮೂರನೇ ಅಲೆ ಬಿಂಬಿತವಾಗಿದೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಬದ್ಧವಾಗಿದ್ದು, ಕಠಿಣ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನ ಬಿಬಿಎಂಪಿ ಶಾಲೆಯಲ್ಲಿ 15-18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಬೊಮ್ಮಾಯಿ, ನಮ್ಮ ಮುಂದೆ ಕೊರೊನಾ ಎದುರಿಸಬೇಕಾದ ಬಹುದೊಡ್ಡ ಸವಾಲು ಇದೆ. ಈಗಾಗಲೇ ಮೂರನೆ ಅಲೆ ಬಿಂಬಿತವಾಗಿದೆ. ಎರಡನೆ ಅಲೆಯಲ್ಲಿ ಉಂಟಾದಂತಹ ಪರಿಸ್ಥಿತಿ ಎದುರಾಗಬಾರದು. ಜನರ ಜೀವ ಮುಖ್ಯ. ಈ ನಿಟ್ಟಿನಲ್ಲಿ ತಕ್ಷಣ ಜಾಗೃತರಾಗಬೇಕಾದ ಅಗತ್ಯವಿದೆ. ಸಾಕಷ್ಟು ಮುಂಜಾಗೃತಾ ಕ್ರಮ ಕೈಗೊಳ್ಳಬೇಕಿದೆ ಎಂದರು.
ಆರ್ಥಿಕತೆಗೆ ಹೊಡೆತವಾಗದಂತೆ ರಾಜ್ಯದಲ್ಲಿ ಕಠಿಣ ನಿಯಮ ಜಾರಿಗೆ ಬರಲಿದೆ. ಗಡಿ ಜಿಲ್ಲೆಗಳಲ್ಲೂ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು. ಜನರು ಕಡ್ಡಾಯವಾಗಿ ಮಾಸ್ಕ್, ದೈಹಿಕ ಅಂತರ ಪಾಲನೆ ಮಾಡಬೇಕು. ಅನಗತ್ಯ ಓಡಾಟ, ವ್ಯಾಕ್ಸಿನೇಷನ್ ಬಗ್ಗೆ ನಿರ್ಲಕ್ಷ ಬೇಡ ಎಂದು ಹೇಳಿದರು.