ಅಡುಗೆ ಮಾಡಿದಾಗ ರಾತ್ರಿ ಅನ್ನ ಸ್ವಲ್ಪ ಹೆಚ್ಚಾಗಿ ಉಳಿದರೆ ಅದನ್ನು ಚಿತ್ರಾನ್ನ ಅಥವಾ ಪುಳಿಯೋಗರೆ ಮಾಡಿ ಬೆಳಗ್ಗೆ ಸವಿಯುತ್ತೇವೆ.
ಈ ಚಿತ್ರಾನ್ನ, ಪುಳಿಯೋಗರೆ ಲಿಸ್ಟ್ ಗೆ ಈಗ ಕೊಬ್ಬರಿ ಅನ್ನವನ್ನು ಸೇರಿಸಿಕೊಳ್ಳಿ. ಕೊಬ್ಬರಿ ಮನೆಯಲ್ಲಿ ಇದ್ದರೆ ದಿಢೀರಂತ ಕೊಬ್ಬರಿ ಅನ್ನವನ್ನು ತಯಾರಿಸಬಹುದು. ಇಲ್ಲಿದೆ ಕೊಬ್ಬರಿ ಅನ್ನ ತಯಾರಿಸುವ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು
ಅನ್ನ – 2 ಕಪ್
ಹಸಿ ಕೊಬ್ಬರಿ ತುರಿ – 3/4 ಕಪ್
ಉದ್ದಿನಬೇಳೆ – 1 ಚಮಚ
ಕಡಲೆ ಬೇಳೆ – 1 ಚಮಚ
ಕಡಲೇಕಾಯಿ ಬೀಜ – 2 ಚಮಚ
ಜೀರಿಗೆ – 1/2 ಚಮಚ
ಸಾಸಿವೆ – 1/4 ಚಮಚ
ಹಸಿಮೆಣಸಿನಕಾಯಿ – 4
ಕರಿಬೇವು -1 ಕಡ್ಡಿ
ಕೊತ್ತಂಬರಿ ಸೊಪ್ಪು – 2 ಎಸಲು
ಒಗ್ಗರಣೆಗೆ ಎಣ್ಣೆ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಬಾಣಲೆಯನ್ನು ಸ್ಟವ್ ಮೇಲಿಟ್ಟು ಕಾದ ನಂತರ ಎರಡು ಚಮಚ ಎಣ್ಣೆಗೆ ಸಾಸಿವೆ, ಜೀರಿಗೆ, ಕಡಲೆಕಾಯಿ ಬೀಜ, ಕರಿಬೇವು, ಉದ್ದಿನಬೇಳೆ, ಕಡಲೇಬೇಳೆ, ಹಸಿಮೆಣಸಿನಕಾಯಿ ಹಾಕಿ ಹುರಿದುಕೊಳ್ಳಬೇಕು. ಸ್ವಲ್ಪ ಹೊತ್ತಿನ ನಂತರ ಕೊಬ್ಬರಿ ತುರಿಯನ್ನು ಇದಕ್ಕೆ ಹಾಕಿ ಹುರಿದುಕೊಳ್ಳಬೇಕು. ನಂತರ ಉಪ್ಪು ಹಾಕಿ ಅನ್ನವನ್ನು ಹಾಕಿ ಚೆನ್ನಾಗಿ ಕಲಸಿ ಕೊಂಡರೆ ಕೊಬ್ಬರಿ ಅನ್ನ ಸಿದ್ದವಾಗುತ್ತದೆ. ಇದಕ್ಕೆ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿ ಹಾಕಿ, ಬೇಕಾದರೆ ಗೋಡಂಬಿಯನ್ನು ಹಾಕಿಕೊಳ್ಳಬಹುದು.