ಏಳುವರೆ ವರ್ಷಗಳ ಹಿಂದೆ ದುನಿಯಾ ವಿಜಯ್ ಅಭಿನಯದ ‘ಮಾಸ್ತಿಗುಡಿ’ ಚಲನಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಖಳ ನಟರಾದ ಉದಯ್ ಹಾಗೂ ಅನಿಲ್ ಸಾವನ್ನಪ್ಪಿದ್ದು, ಈ ಪ್ರಕರಣದ ವಿಚಾರಣೆ ಬೆಂಗಳೂರು ನಗರ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ವಿಚಾರಣೆ ವೇಳೆ ಸಾಹಸ ನಿರ್ದೇಶಕ ರವಿವರ್ಮ ಪರ ವಕೀಲರಾದ ಸಿ.ಎಚ್. ಹನುಮಂತರಾಯ ಮಹತ್ವದ ಅಂಶವನ್ನು ಉಲ್ಲೇಖಿಸಿದ್ದು, ತಮ್ಮ ಸಿಕ್ಸ್ ಪ್ಯಾಕ್ ದೇಹವನ್ನು ಪ್ರೇಕ್ಷಕರು ನೋಡಬೇಕೆಂದು ಬಯಸಿದ್ದ ಉದಯ್ ಹಾಗೂ ಅನಿಲ್ ಸೇಫ್ಟಿ ಜಾಕೆಟ್ ಧರಿಸಲು ನಿರಾಕರಿಸಿದ್ದರು ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಅಲ್ಲದೆ ತಮಗೆ ಈಜು ಬರುವುದಾಗಿಯೂ ಅವರುಗಳು ತಿಳಿಸಿದ್ದು, ಅವರ ಒಪ್ಪಿಗೆ ಮೇರೆಗೆ ಚಿತ್ರೀಕರಣ ನಡೆಸಲಾಗಿತ್ತು. ಈ ಅಂಶ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲೂ ಉಲ್ಲೇಖವಾಗಿದೆ ಎಂದು ಸಿ.ಎಚ್. ಹನುಮಂತರಾಯ ವಿವರಿಸಿದ್ದಾರೆ.
ಪ್ರಕರಣದ ವಿವರ: 2016 ರ ನವೆಂಬರ್ 7ರಂದು ಬೆಂಗಳೂರಿನ ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈ ವೇಳೆ ಹೆಲಿಕಾಪ್ಟರ್ ನಿಂದ ನಾಯಕ ನಟ ದುನಿಯಾ ವಿಜಯ್, ಖಳನಟರಾದ ಉದಯ್ ಹಾಗೂ ಅನಿಲ್ ಹೆಲಿಕಾಪ್ಟರ್ ನಿಂದ ಧುಮುಕಿದ್ದರು.
ಆದರೆ ಈಜು ಬಾರದ ಕಾರಣ ಉದಯ್ ಹಾಗೂ ಅನಿಲ್ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿದ್ದು, ತಾವರೆಕೆರೆ ಪೊಲೀಸರು, ಚಿತ್ರದ ಸಾಹಸ ನಿರ್ದೇಶಕ ರವಿವರ್ಮ ಮತ್ತಿತರ ಐವರ ವಿರುದ್ಧ ನಿರ್ಲಕ್ಷದಿಂದ ವ್ಯಕ್ತಿಯ ಸಾವಿಗೆ ಕಾರಣವಾದ ಪ್ರಕರಣದಡಿ ಆರೋಪ ಪಟ್ಟಿ ಸಲ್ಲಿಸಿದರು. ಇದರ ವಿಚಾರಣೆ ಈಗ ನ್ಯಾಯಾಲಯದಲ್ಲಿ ನಡೆದಿದೆ.