ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಓಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ ದೆಹಲಿಯಲ್ಲಿ ಪಾಸಿಟಿವಿಟಿ ದರ ಶೇಕಡಾ 6.5ಕ್ಕೆ ಏರಿಕೆಯಾಗಿದೆ.
ಇದೇ ಕಾರಣಕ್ಕೆ ದೆಹಲಿ ಸರ್ಕಾರವು ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೆ ತರಲು ಇಂದು ನಿರ್ಧಾರ ಕೈಗೊಂಡಿದೆ. ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಇರಲಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ದೆಹಲಿಯಲ್ಲಿ ಮೆಟ್ರೋ ಹಾಗೂ ಬಸ್ಗಳು 100 ಪ್ರತಿಶತ ಸಾಮರ್ಥ್ಯದಲ್ಲಿಯೇ ಚಲಿಸಲಿದೆ. ಆದರೆ ಯಾರಿಗೂ ಸಹ ಮಾಸ್ಕ್ ಇಲ್ಲದೆಯೇ ಬಸ್ ಇಲ್ಲವೇ ಮೆಟ್ರೋವನ್ನು ಏರಲು ಅನುಮತಿ ಇರುವುದಿಲ್ಲ. ಕೋವಿಡ್ ಸೋಂಕು ಸೂಪರ್ ಸ್ಪ್ರೆಡ್ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕೊರೊನಾ ವೈರಸ್ ಹರಡುವುದು ತಪ್ಪಿಸಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೆ ತರಲಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಸರ್ಕಾರಿ ನೌಕರರು ವರ್ಕ್ ಫ್ರಮ್ ಹೋಂನಲ್ಲಿ ಇರಲಿದ್ದಾರೆ. ಖಾಸಗಿ ಕಚೇರಿಗಳಲ್ಲಿ 50 ಪ್ರತಿಶತ ನೌಕರರು ವರ್ಕ್ ಫ್ರಮ್ ಹೋಮ್ನಲ್ಲಿ ಇರಬೇಕು ಎಂದು ಹೇಳಿದರು.