ಕೊರೊನಾ ಸೋಂಕು ಕಡಿಮೆಯಾದ ಹಿನ್ನಲೆಯಲ್ಲಿ ಎರಡು ವರ್ಷಗಳ ಬಳಿಕ ಮಧ್ಯ ಪ್ರದೇಶದ ಇಂದೋರ್ ನಲ್ಲಿ ಮತ್ತೆ ಆರಂಭವಾದ ಮಾವಿನ ಮೇಳ-2022 ಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ. ಮೂರು ದಿನಗಳಲ್ಲಿ ಬರೋಬ್ಬರಿ 5.25 ಕೋಟಿ ರೂಪಾಯಿ ಮೌಲ್ಯದ ಹಣ್ಣು ಮಾರಾಟವಾಗಿದೆ.
ದೇಶದ ವಿವಿಧ ಭಾಗಗಳಿಂದ ಮಾವಿನ ಹಣ್ಣನ್ನು ತರಿಸಲಾಗಿದ್ದು, ಅದರಲ್ಲೂ ಮಹಾರಾಷ್ಟ್ರದ ರತ್ನಗಿರಿ, ದಿಯೋಘರ್, ಕೊಂಕಣದ ಸ್ವರ್ಗಭೂತಿಯಿಂದ ತರಲಾಗಿದ್ದ ಹಾಪುಸ್ ತಳಿಯ ಮಾವಿನ ಹಣ್ಣು ಅತಿ ಹೆಚ್ಚು ಮಾರಾಟವಾಗಿದೆ. ಒಟ್ಟು 65 ಸಾವಿರ ಡಜನ್ ಮಾವಿನ ಹಣ್ಣು ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮೂರು ದಿನಗಳ ಕಾಲ ಈ ಮೇಳ ನಡೆದಿದ್ದು, ಅಂತಿಮ ದಿನವಾದ ಭಾನುವಾರದಂದು ಆಪಾರ ಜನಜಂಗುಳಿ ನೆರೆದಿತ್ತು. ತಳಿಗಳ ಆಧಾರದ ಮೇಲೆ ಮಾವಿನ ಹಣ್ಣಿನ ದರ ನಿಗದಿಪಡಿಸಲಾಗಿದ್ದು, ಡಜನ್ ಒಂದಕ್ಕೆ 150 ರೂ. ಗಳಿಂದ 3,000 ರೂಪಾಯಿಗಳವರೆಗೆ ಮಾರಾಟವಾಗಿದೆ.
ಅದರಲ್ಲೂ ಕೊಂಕಣದ ಸ್ವರ್ಗಭೂತಿಯಿಂದ ತರಿಸಲಾಗಿದ್ದ ಮಾವಿನ ಹಣ್ಣುಗಳು ಡಜನ್ ಒಂದಕ್ಕೆ 1,000 ರೂ. ಗಳಿಂದ 1,500 ರೂಪಾಯಿಗಳಿಗೆ ಮಾರಾಟವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.