ಬೆಂಗಳೂರು: ಇತ್ತೀಚೆಗಷ್ಟೆ ರಾತ್ರಿ 11 ಗಂಟೆ ನಂತರ ಓಡಾಡಿದ್ದರು ಎಂಬ ಕಾರಣಕ್ಕೆ ದಂಪತಿಗೆ ದಂಡ ಹಾಕಿ ಪೊಲೀಸರು ಹಣ ವಸೂಲಿ ಮಾಡಿದ್ದರು. ಇದಾದ ಬಳಿಕ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಘಟನೆ ಹಂಚಿಕೊಂಡಿದ್ದರು. ಬಳಿಕ ಆ ಪೇದೆಗಳನ್ನು ಅಮಾನತು ಮಾಡಲಾಗಿತ್ತು. ಈ ಘಟನೆ ಇನ್ನೂ ಹಸಿಯಾಗಿದೆ. ಇಂಥಹದ್ದೇ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಚೈತ್ರ ರತ್ನಾಕರ್ ಹಾಗೂ ಚೀರಾಸ್ ಎಂಬವರು ಕೋರಮಂಗಲದ ನೆಕ್ಸಾಸ್ ಮಾಲ್ ಬಳಿ ಸಿಗರೇಟ್ ಸೇದುತ್ತಾ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಆಡುಗೋಡಿ ಠಾಣೆಯ ಇಬ್ಬರು ಪೇದೆಗಳು ಹಣ ನೀಡುವಂತೆ ಒತ್ತಾಯ ಮಾಡಿದ್ದಾರೆ. ಹಣ ಕೊಡದೇ ಹೋದರೆ ಎಫ್ಐಆರ್ ಹಾಕ್ತೀವಿ ಎಂದು ಬೆದರಿಕೆ ಹಾಕಿದ್ದಾರೆ. ಪೊಲೀಸರ ಅವಾಜ್ಗೆ ಹೆದರಿದ ರತ್ನಾಕರ್ ಮತ್ತು ಚೀರಾಸ್ ನಾಲ್ಕು ಸಾವಿರ ಹಣ ನೀಡಿದ್ದಾರೆ.
ಅವರ ಬಳಿ ಹಣ ಇಲ್ಲದೇ ಹೋಗಿದ್ದಕ್ಕೆ ಕಾನ್ಸ್ಟೇಬಲ್ಗಳಿಗೆ ಪರಿಚಿತರ ಟೀ ಅಂಗಡಿಯವರಿಂದ ಹಣವನ್ನು ಫೋನ್ಪೇ ಮಾಡಿಸಿದ್ದಾರೆ. ಬಳಿಕ ಈ ಬಗ್ಗೆ ರತ್ನಾಕರ್ ಡಿಜಿ-ಐಜಿಪಿಗೆ ಟ್ವೀಟ್ ಮಾಡಿ ದೂರು ನೀಡಿದ್ದರು. ದೂರಿನನ್ವಯ ಅರವಿಂದ್ ಮತ್ತು ಮಾಳಪ್ಪ ಬಿ. ವಾಲಿಕಾರ್ ಎಂಬ ಪೇದೆಗಳನ್ನು ಅಮಾನತು ಮಾಡಲಾಗಿದೆ.